ಬೆಂಗಳೂರು: ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿಯೇ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಘೋರಾತಿಘೋರ ಅಂಶಗಳು ಒಂದೊಂದಾಗಿ ಬಯಲಾಗುತ್ತಿವೆ.
ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್ (68) ಏ.೨೦ರಂದು ಮಧ್ಯಾಹ್ನ ಹೆಚ್.ಎಸ್.ಆರ‍್.ಲೇಔಟ್ ನ ತಮ್ಮ ಮನೆಯಲ್ಲಿ ಊಟಕ್ಕೆ ಕುಳಿತಿದ್ದರು. ಊಟಕ್ಕೆ ಕುಳಿತಿದ್ದಾಗಲೇ ಅವರನ್ನು ಪತ್ನಿ ಪಲ್ಲವಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಮಧ್ಯಾಹ್ನ ಊಟಕ್ಕೆ ಎರಡು ಮೀನು ತರಿಸಿಕೊಂಡಿದ್ದರು. ಊಟಕ್ಕೆ ಡೈನಿಂಗ್ ಟೇಬಲ್ ಮೇಲೆ ಕುಳಿತಿದ್ದವರ ಜೊತೆ ಪತ್ನಿ ಜಗಳ ತೆಗೆದಿದ್ದಾರೆ. ಇದೇ ವೇಳೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.
ಕ್ರೈಂ ಸೀನ್ ಪರಿಶೀಲನೆ ವೇಳೆ ಪೊಲೀಸರಿಗೆ ಡೈನಿಂಗ್ ಟೇಬಲ್ ಬಳಿ ಊಟದ ತಟ್ಟೆ ಪತ್ತೆಯಾಗಿದೆ. ಅದರ ಪಕ್ಕದಲ್ಲೇ ರಕ್ತದ ಮಡುವಲ್ಲಿ ಓಂ ಪ್ರಕಾಶ್ ಶವ ಪತ್ತೆಯಾಗಿದೆ. ಪತಿಯನ್ನು ಹತ್ಯೆಗೈದ ಬಳಿಕ ಪತ್ನಿ ಪಲ್ಲವಿಯೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಬಂದಾಗ ಓಂ ಪ್ರಕಾಶ್ ರಕ್ತಸಿಕ್ತವಾಗಿ ರಕ್ತದ ಮಡುವಲ್ಲಿ ಬಿದ್ದು ಸಾವನ್ನಪ್ಪಿದ್ದರು. ಅವರ ಮಗಳು ರೂಂ ಬಾಗಿಲು ಲಾಕ್ ಮಾಡಿಕೊಂಡಿದ್ದರು. ಬಾಗಿಲು ತೀಯುವಂತೆ ಹೇಳಿದಾಗ ತೆಗೆಯಲ್ಲ ಎಂದು ರಂಪಾಟ ಮಾಡಿದ್ದರು. ಈ ವೇಳೆ ಪೊಲೀಸರು ರೂಂ ಬಾಗಿಲು ಒಡೆದು ಒಳ ಪ್ರವೇಶಿಸಿ ಮಗಳು ಕೃತಿಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಪತ್ನಿ ಪಲ್ಲವಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.