ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ತಮ್ಮ ವಿರುದ್ಧ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿರುವ ಎಲ್ಲಾ ಆರೋಪಗಳು ಸುಳ್ಳು ಎಂದು ನ್ಯಾಯಾಲಯದ ಮುಂದೆ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳು ಹೇಳಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಇಂದು ಸೆಷನ್ಸ್ ಕೋರ್ಟ್ ನಲ್ಲಿ ಆರೋಪ ನಿಗದಿ ಮಾಡಲಾಯಿತು. ಈ ವೇಳೆ ನ್ಯಾಯಾಧೀಶರು ಕೇಳಿದ ಪ್ರಶ್ನೆಗಳಿಗೆ ನಾವು ಹತ್ಯೆ ಮಾಡಿಲ್ಲ ಎಂದು ಆರೋಪಿಗಳು ಹೇಳಿದ್ದಾರೆ.
ಕೋರ್ಟ್ ಒಳಗೆ ಆರೋಪಿಗಳನ್ನು ಅವರ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿರುವ ಆರೋಪಿಗಳ ಸಂಖ್ಯೆಗೆ ಅನುಗುಣವಾಗಿ ನಿಲ್ಲುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ. ಎ 1 ಆರೋಪಿ ಪವಿತ್ರ ಗೌಡ, ಎ2 ಆರೋಪಿ ದರ್ಶನ್ ಸೇರಿದಂತೆ ಉಳಿದ ಆರೋಪಿಗಳು ಹಾಜರಾಗಿರುವುದನ್ನು ಖಚಿತಪಡಿಸಿಕೊಂಡ ನಂತರ ಪೊಲೀಸರು ಸಲ್ಲಿಸಿದ್ದ ದೋಷಾರೋಪವನ್ನು ಓದಲಾಗಿದೆ.
ನಮ್ಮ ಮೇಲಿರುವ ಆರೋಪಗಳು ಸುಳ್ಳು. ನಾವು ಕೊಲೆಗಡುಕರಲ್ಲ ಎಂದು ಆರೋಪಿಗಳು ತಮ್ಮ ಮೇಲಿನ ದೋಷಾರೋಪವನ್ನು ನಿರಾಕರಿಸಿದ್ದಾರೆ. ನಮ್ಮ ವಕೀಲರನ್ನು ಬದಲಾಯಿಸಬೇಕಿದೆ. ಹೆಚ್ಚಿನ ಕಾಲಾವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ. ಆರೋಪ ನಿಗದಿ ಮಾಡಿದ ಬಳಿಕ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ.
