ಬೆಂಗಳೂರು: ಲೋಕಸಭೆ ಚುನಾವಣೆಯ ವೇಳೆ ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾದಾವರ ಗೋವಿಂದಪ್ಪ ಎಂಬುವರ ಮನೆಯಲ್ಲಿ 4.8 ಕೋಟಿ ರೂ. ಜಪ್ತಿಯಾದ ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ.ಕೆ. ಸುಧಾಕರ್ ಅವರ ವಿರುದ್ಧ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.
ಜೂನ್ 13 ರಂದು ವಿಶೇಷ ನ್ಯಾಯಾಲಯವು ಕೆ. ಸುಧಾಕರ್ ಮತ್ತು ಮಾದಾವರ ಗೋವಿಂದಪ್ಪ ವಿರುದ್ಧ ವಿಚಾರಣೆಗೆ ಅಂಗೀಕರಿಸಿದ ಪ್ರಕ್ರಿಯೆಯನ್ನು ವಜಾಗೊಳಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ಏಕ ಸದಸ್ಯಪೀಠ ತಡೆಯಾಜ್ಞೆ ನೀಡಿದೆ.
ಹಿರಿಯ ವಕೀಲ ಪ್ರಭುಲಿಂಗ ನಾವಡಗಿ ಅರ್ಜಿದಾರರ ಪರ ವಾದ ಮಂಡಿಸಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಬೇರೊಬ್ಬರ ಮನೆಯಲ್ಲಿ ನಗದು ಪತ್ತೆಯಾಗಿತ್ತು. ಇದಕ್ಕೆ ಕೆ. ಸುಧಾಕರ್ ವಿರುದ್ಧ ಐಪಿಸಿ ಸೆಕ್ಷನ್ 171ಎಫ್ ಅನ್ವಯಿಸಲಾಗಿದೆ. ಇದೇ ನ್ಯಾಯಾಲಯ ಬೇರೊಬ್ಬರ ಮನೆಯಲ್ಲಿ ನಗದು ಪತ್ತೆಯಾದರೆ ಸೆಕ್ಷನ್ 171ಎಫ್ ಅನ್ವಯಿಸಲಾಗದು ಎಂದು ಆದೇಶ ನೀಡಿದೆ. ಈ ಹಿಂದೆ ಪ್ರಕ್ರಿಯೆಯನ್ನು ಹೈಕೋರ್ಟ್ ರದ್ದು ಮಾಡಿತ್ತು ಎಂದು ವಾದ ಮಂಡಿಸಿದ್ದಾರೆ.
ವಾದ -ಪ್ರತಿವಾದ ಆಲಿಸಿದ ನ್ಯಾಯಾಲಯ ನೆಲಮಂಗಲ ಉಪ ವಿಭಾಗದಲ್ಲಿರುವ ಮಾದನಾಯಕನಹಳ್ಳಿ ಪೊಲೀಸರು ಮತ್ತು ದೂರುದಾರ ದಶರಥ ಕುಂಬಾರ್ ಅವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.