ಶಿವಮೊಗ್ಗ : ದೂರುದಾರರಾದ ಚಿದಾನಂದ, ಹದಿಕೆರೆ, ತರಿಕೆರೆ ತಾ. ಚಿಕ್ಕಮಗಳೂರು ಜಿಲ್ಲೆ ಇವರು ಚೋಳ ಎಂ.ಎಸ್.ಜನರಲ್ ಇನ್ಶೂರೆನ್ಸ್ ಕಂಪೆನಿ ಲಿ., ಶೇಷಾದ್ರಿಪುರಂ ಎಕ್ಸಟೆನ್ಷನ್, ಶಿವಮೊಗ್ಗ ಹಾಗೂ ಚೋಳ ಎಂ.ಎಸ್.ಜನರಲ್ ಇನ್ಶೂರೆನ್ಸ್ ಕಂಪೆನಿ ಲಿ., ತಂಬುಚೆಟ್ಟಿ ಸ್ಟ್ರೀಟ್ , ಚೆನೈ ಇವರುಗಳ ವಿರುದ್ದ ವಿಮಾ ಸೌಲಭ್ಯ ನೀಡುವಲ್ಲಿನ ಸೇವಾ ನ್ಯೂನತೆ ಕುರಿತು ವಕೀಲರ ಮೂಲಕ ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವಿಮಾ ಕಂಪೆನಿಯು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರ ಚಿದಾನಂದ ಇವರ ಮಗ 2022ರಲ್ಲಿ ದ್ವಿಚಕ್ರ ವಾಹನದ ಅಪಘಾತದಿಂದ ಮರಣ ಹೊಂದಿದ್ದು, ಇನ್ಷೂರೆನ್ಸ್ ಕಂಪನಿಗೆ ಓ.ಡಿ ಕ್ಲೇಮ್ ಮತ್ತು ವೈಯಕ್ತಿಕ ಅಪಘಾತದ ಕ್ಲೇಮ್ ಮೊತ್ತವನ್ನು ನೀಡಲು ಕೋರಿರುತ್ತಾರೆ. ಆದರೆ ಎದುರುದಾರ ಇನ್ಷೂರನ್ಸ್ ಕಂಪನಿಯು ಅಪಘಾತದ ವಿಷಯವನ್ನು ತಿಳಿಸಲು 424 ದಿನಗಳ ವಿಳಂಬವಾಗಿದೆ ಎಂಬ ಕಾರಣ ನೀಡಿ ವಿಮಾ ಹಣವನ್ನು ನೀಡಲು ನಿರಾಕರಿಸಿರುತ್ತಾರೆ ಎಂದು ದೂರು ಸಲ್ಲಿರುತ್ತಾರೆ.
ಆಯೋಗವು ನೀಡಿದ ನೋಟಿಸ್ಗೆ ಎದುರುದಾರರು ವಕೀಲರ ಮೂಲಕ ಹಾಜರಾಗಿ ಅಪಘಾತದ ವಿಷಯವನ್ನು ವಿಳಂಬವಾಗಿ ತಿಳಿಸಿರುವುದರಿಂದ ಕ್ಲೇಮ್ನ್ನು ತಿರಸ್ಕರಿಸಿರುವುದಾಗಿ ಹಾಗೂ ತಮ್ಮಿಂದ ಯಾವುದೇ ಸೇವಾ ನ್ಯೂನತೆಯಾಗಿರುವುದಿಲ್ಲವಾದ ಕಾರಣ ದೂರನ್ನು ವಜಾ ಮಾಡಬೇಕಾಗಿ ವಿನಂತಿಸಿರುತ್ತಾರೆ.
ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ಮತ್ತು ಉಭಯ ಪಕ್ಷಗಾರರ ವಕೀಲರ ವಾದವನ್ನು ಆಲಿಸಿ ಮತ್ತು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪರಿಗಣನೆಗೆ ತೆಗೆದುಕೊಂಡು, ಎದುರುದಾರರು ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ ದೂರುದಾರರು ಸಲ್ಲಿಸಿರುವ ದೂರನ್ನು ಭಾಗಶಃ ಪುರಸ್ಕರಿಸಿ, ವೈಯಕ್ತಿಕ ಅಪಘಾತ ಕ್ಲೇಮ್ ಮೊತ್ತ ರೂ.15,00,000 ಗಳನ್ನು ದಿ:31/05/2024ರಿಂದ ಅನ್ವಯವಾಗುವಂತೆ ಶೇ.9 ರಂತೆ ಬಡ್ಡಿ ಸಹಿತ ಈ ಆದೇಶವಾದ 45 ದಿನಗಳೊಳಗಾಗಿ ಪಾವತಿಸಲು, ತಪ್ಪಿದಲ್ಲಿ ವಿಮಾ ಮೊತ್ತಕ್ಕೆ ಶೇ.12 ರಂತೆ ಬಡ್ಡಿ ಸಹಿತ ಪಾವತಿಸಲು ಹಾಗೂ ರೂ.25,000 ಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ರೂ.10,000 ಗಳನ್ನು ವ್ಯಾಜ್ಯದ ಖರ್ಚಾಗಿ ನೀಡಬೇಕೆಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಏ. 02 ರಂದು ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ತಿಳಿಸಿದ್ದಾರೆ.