ಲಖನೌ: 8 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ.
ಉತ್ತರ ಪ್ರದೇಶದ ಫರೂಕಾಬಾದ್ ನಲ್ಲಿ ಈ ಘಟನೆ ನಡೆದಿದೆ. ಮನು (55) ಎನ್ ಕೌಂಟರ್ ಗೆ ಬಲಿಯಾದ ಕಾಮುಕ. ಈ ಹಿಂದೆಯೂ ಕೊಲೆ, ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ.
ಪ್ಲಾಸ್ಟಿಕ್ ಆಯುವ ಕೆಲಸ ಮಾಡುತ್ತಿದ್ದ ಆರೋಪಿ ಮನು ಜೂನ್ 27ರಿಂದ ನಾಪತ್ತೆಯಾಗಿದ್ದ. ಈತನ ಬಗ್ಗೆ ಸುಳಿವು ನೀಡಿದವರಿಗೆ ಪೊಲೀಸರು 50 ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ದರು. ಮೊಹಮ್ಮದಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನು ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆತನ ಬಂಧನಕ್ಕೆ ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಈ ವೇಳೆ ಪೊಲೀಸರು ಪ್ರತಿ ದಾಳಿ ನಡೆಸಿದ್ದಾರೆ. ಎನ್ ಕೌಂಟರ್ ನಲ್ಲಿ ಆರೋಪಿ ಬಲಿಯಾಗಿದ್ದಾನೆ.
ತನ್ನ ಚಿಕ್ಕಮ್ಮನ ಮನೆಗೆ ಬಂದಿದ 8 ವರ್ಷದ ಬಾಲಕಿ ಮಾಹಿನ ಹಣ್ಣು ಕೀಳಲೆಂದು ತೋಟಕ್ಕೆ ಹೋಗಿದ್ದಳು. ಮನೆಗೆ ವಾಪಸ್ ಆಗಿಲ್ಲ. ಬಾಲಕಿ ನಾಪತ್ತೆ ದೂರು ದಾಖಲಾಗಿತ್ತು. ಪೊಲೀಸರು ಹುಡುಕಾಟ ನಡೆಸಿದಾಗ ಜೂನ್ 28ರಂದು ಆಲಿಪುರ ಖೇಡಾ ಬಳಿಯ ಹೊಲದಲ್ಲಿ 8 ವರ್ಷದ ಬಾಲಕಿಯ ಶವ ಪತ್ತೆಯಾಗಿತ್ತು. ತನಿಖೆ ವೇಳೆ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ತಿಳಿದುಬಂದಿತ್ತು. ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಆರೋಪಿ ಬಂಧನಕ್ಕೆ ಆಗ್ರಹಿಸಿದ್ದರು. ಕೇಸ್ ದಾಖಲಾಗುತ್ತಿದ್ದಂತೆ ಆರೋಪಿ ಮನು ನಾಪತ್ತೆಯಾಗಿದ್ದ. ಇದೀಗ ಆತ ಪೊಲೀಸ್ ಎನ್ ಕೌಂಟರ್ ಗೆ ಬಲಿಯಾಗಿದ್ದಾನೆ.