ಬೆಂಗಳೂರು: ನಟಿ, ಮಾಜಿ ಸಂಸದೆ ರಮ್ಯಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ ರವಾನಿಸಿದ್ದ ನಟ ದರ್ಶನ್ ಫ್ಯಾನ್ಸ್ ವಿರುದ್ಧ ಕಾನೂನು ಸಮರ ಕೈಗೊಂಡಿದ್ದ ರಮ್ಯಾ, ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ರಮ್ಯಾ, ಸದ್ಯಕ್ಕೆ ಕಮೆಂಟ್ ಸೆಕ್ಷನ್ ಸ್ವಚ್ಚಾರತ್ ಆದಂತಾಗಿದೆ. ಟ್ರೋಲ್ ಮಾಡಿದ್ದ ೭ ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.
ಎಷ್ಟೋ ಜನ ಫೋನ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಆಗಿದ್ದಾರೆ. ಇನ್ನೂ ಹಲವರನ್ನು ಅರೆಸ್ಟ್ ಮಾಡ್ತೀವಿ ಎಂದು ಪೊಲೀಸರು ಹೇಳಿದ್ದಾರೆ ಎಂದು ತಿಳಿಸಿದರು. ಕೆಟ್ಟದಾಗಿ ಮೆಸೇಜ್ ಕಳುಹಿಸಿದವರ ವಿರುದ್ಧ ದೂರು ನೀಡಿದ ಬಳಿಕ ಈಗ ಎಲ್ಲಾ ಬ್ಯಾಡ್ ಕಮೆಂಟ್ ಗಳು ಬಂದ್ ಆಗಿವೆ ಎಂದರು.
ಇನ್ನು ನಟ ದರ್ಶನ್ ಮತ್ತೆ ಅರೆಸ್ಟ್ ಆಗಿ ಜೈಲುಪಾಲಾಗಿರುವ ವಿಚಾರವಾಗಿ ಮಾತನಾಡಿದ ನಟಿ ರಮ್ಯಾ, ಸುಪ್ರೀಂ ಕೋರ್ಟ್ ತೀರ್ಪಿನಿಂದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯಸಿಕ್ಕಂತಾಗಿದೆ. ಹಾಗಾಗಿ ನ್ಯಾಯಾಲಯಕ್ಕೆ ಧನ್ಯವಾದ ಹೇಳುತ್ತೇನೆ. ಸುಪ್ರೀಂ ಕೋರ್ಟ್ ತೀರ್ಪಿನಿಂದ ನನಗೆ ಸಂತೋಷವಾಗಿದೆ. ನಟ ದರ್ಶನ್ ಅವರ ಜೀವನವನ್ನು ಅವರೇ ಹಾಳು ಮಾಡಿಕೊಂಡಿದ್ದಾರೆ ಎನಿಸುತ್ತದೆ. ಒಬ್ಬ ಲೈಟ್ ಮ್ಯಾನ್ ಆಗಿ ಚಿತ್ರರಂಗದಲ್ಲಿ ದೊಡ್ಡ ಹೀರೋ ಆದವರು ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿ ಇನ್ನೂ ಒಳ್ಳೆಯ ವ್ಯಕ್ತಿಯಾಗಿ ಮಾದರಿಯಾಗಬಹುದಿತ್ತು. ಆದರೆ ಕೆಲ ತಪ್ಪು ನಿರ್ಧಾರದಿಂದಾಗಿ ಅವರೇ ಅವರ ಜೀವನ ಹಾಳುಮಾಡಿಕೊಂಡಿದ್ದಾರೆ ಎಂಬುದು ನನ್ನ ಅಭಿಪ್ರಾಯ ಎಂದರು.