ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕೂಲಿ’ ವಿಶ್ವದಾದ್ಯಂತ ಬಿಡುಗಡೆಯಾಗಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಮೊದಲ ದಿನ ಹೌಸ್ ಫುಲ್ ಪ್ರದರ್ಶನ ಕಂಡಿದ್ದು, ವಿಶ್ವದಾದ್ಯಂತ ದಿನದ ಗಳಿಕೆ ಸುಮಾರು 130 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಭಾರತದಲ್ಲಿ ಸುಮಾರು 53 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ ‘ಕೂಲಿ’ ಸಿನಿಮಾ ಕರ್ನಾಟಕದಲ್ಲಿಯೂ ಮೊದಲ ದಿನ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಟಿಕೆಟ್ ದರ ಭಾರಿ ಏರಿಕೆಯಾಗಿದ್ದರೂ ರಜನಿಕಾಂತ್ ಅಭಿಮಾನಿಗಳು ಮೊದಲ ದಿನವೇ ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ.
ಚೆನ್ನೈನಲ್ಲಿ ಗರಿಷ್ಠ 4500 ರೂ.ವರೆಗೂ ಟಿಕೆಟ್ ಮಾರಾಟವಾಗಿದೆ. ಬೆಂಗಳೂರಿನಲ್ಲಿ 2500ರೂ. ವರೆಗೂ ಟಿಕೆಟ್ ಮಾರಾಟವಾಗಿದೆ. ಆದರೂ ಅಷ್ಟು ಟಿಕೆಟ್ ಗಳು ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಂಡಿವೆ. ಬೆಂಗಳೂರಿನಲ್ಲಿ ಒಟ್ಟು 905 ಶೋಗಳು, ರಾಜ್ಯಾದ್ಯಂತ ಕೂಲಿ ಚಿತ್ರದ 1800ಕ್ಕೂ ಅಧಿಕ ಪ್ರದರ್ಶನ ಕಂಡಿದೆ. ರಾಜ್ಯದಲ್ಲಿ ಮೊದಲ ದಿನವೇ ಸುಮಾರು 10 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಆದರೆ ಚಿತ್ರದ ಬಗ್ಗೆ ನೆಗೆಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಶುಕ್ರವಾರದ ಬುಕಿಂಗ್ ನಲ್ಲಿ ಭಾರಿ ಇಳಿಕೆಯಾಗಿದೆ ಎಂದು ಹೇಳಲಾಗಿದೆ.