ಬೆಳಗಾವಿ: ಪಶ್ಚಿಮ ಘಟ್ಟ, ಮಹಾರಾಷ್ಟ್ರ ಭಾಗದಲ್ಲಿ ಧಾರಾಕರ ಮಳೆಯಾಗುತ್ತಿದ್ದು, ಕೃಷ್ಣ ನದಿಯಲ್ಲಿ ಏಕಾಏಕಿ ನೀರಿನ ಹರಿವು ಹೆಚ್ಚಾಗಿದೆ. ಇದರಿಂದಾಗಿ ಹಲವೆಡೆ ಪ್ರವಾಹ ಭೀತಿ ಎದುರಾಗಿದೆ. ವಿವಿಧ ಸೇತುವೆ, ಹೆದ್ದಾರಿ ಮುಳುಗಡೆಯಾಗಿದ್ದು, ಸಂಚಾರ ಬಂದ್ ಆಗಿದೆ.
ಕೃಷ್ಣಾ ನದಿಯಲ್ಲಿ 1,40,000 ಕ್ಯೂಸೆಕ್ ನಷ್ಟು ಒಳ ಹರಿವು ಹೆಚ್ಚಾಗಿದೆ. ಇದರಿಂದಾಗಿ ಬಾಗಲಕೋಟೆ, ಮಹಾಲಿಂಗಪುರ, ಉಗಾರ, ಕುಡುಚಿ ಮಹಾರಾಷ್ಟ್ರದ ಮೀರಜ್ ಸಂಪರ್ಕಿಸುವ ರಾಜ್ಯ ಹೆದ್ದಾರಿ, ಸೇತುವೆ ಮುಳುಗಡೆಯಾಗಿದೆ. ರಸ್ತೆ ಮಾರ್ಗಗಳನ್ನು ಬಂದ್ ಮಾಡಲಾಗಿದೆ.
ಮಹಾರಾಷ್ಟ್ರ ಸಂಪರ್ಕಿಸುವ ಮಾರ್ಗ ಬಂದ್ ಆಗಿರುವುದರಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗ ಭಾಗದಲ್ಲಿ ಕಳೆದ ಮೂರು ದಿನಗಳಲ್ಲಿ 10 ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ.
ಮಹಾರಾಷ್ಟ್ರ, ಪಶ್ಚಿಮ ಘಟ್ಟ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಕೃಷ್ಣ ಹಾಗೂ ದೂಧಗಂಗಾ ನದಿಯಲ್ಲಿ ಪ್ರವಾಹದ ಆತಂಕ ಎದುರಾಗಿದೆ. ನದಿ ತೀರದ ಜನರಿಗೆ ಜಿಲ್ಲಾಡಳಿತ ಕಟ್ಟೆಚ್ಚರ ಘೋಷಿಸಿದೆ.