ಬಾಲಾಪುರ: ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡಿನ ಹಲವು ಜಿಲ್ಲೆಗಳು ವರುಣಾರ್ಭಟಕ್ಕೆ ತತ್ತರಿಸಿವೆ. ಭಾರಿ ಮಳೆಯಿಂದಾಗಿ ಸಾಲು ಸಾಲು ಅವಾಂತರಗಳು ಸೃಷ್ಟಿಯಾಗಿವೆ. ಮಹಾರಾಷ್ಟ್ರದಲ್ಲಿ ಶತಮಾನಗಳಷ್ಟು ಹಳೆಯದಾದ ಕೋಟೆಯೊಂದು ಸಂಪೂರ್ಣ ಕುಸಿದು ಬಿದ್ದಿದೆ.
ಮಹರಾಷ್ಟ್ರದಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಧಾರಾಕಾರ ಮಳೆಯಿಂದಾಗಿ ಅಕೋಲಾ ಜಿಲ್ಲೆಯ ಬಾಲಾಪುರದ ಬಳಿ ಇರುವ ಐತಿಹಾಸಿಕ ಕೋಟೆ ಕುಸಿದುಬಿದ್ದಿದೆ.
ಶತಮಾನಗಳಷ್ಟು ಹಳೆಯದಾದ ಕೋಟೆ ಕುಸಿದು ಬೀಳುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಐತಿಹಾಸಿಕ ಕೋಟೆ ನಿರ್ವಹಣೆ ಇಲ್ಲದ ಪರಿಣಾಮ ಹಾಗೂ ಭಾರಿ ಮಳೆಯಿಂದಾಗಿ ಶಿಥಿಲಾವಸ್ಥೆಯಲ್ಲಿದ್ದ ಕೋಟೆ ಕುಸಿದು ಬಿದ್ದಿದೆ.
ಈ ಕೋಟೆ ರಾಜಾ ಜಯಸಿಂಗ್ ಆಳ್ವಿಕೆಯಲ್ಲಿ ನಿರ್ಮಿಸಿದ್ದು ಎನ್ನಲಾಗಿದೆ. ಮಹಾರಾಷ್ಟ್ರದ ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿದೆ.