ಬೆಂಗಳೂರು : ವಾಯುಭಾರ ಕುಸಿತ ಉಂಟಾದ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, 2 ದಿನ 5 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಹಾಗೂ ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ಯಾದಗಿರಿ, ಬೀದರ್, ಗದಗ , ಮೈಸೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ , ಎನ್ ಆರ್ ಪುರದಲ್ಲಿ ಭಾರಿ ಮಳೆಯಾಗುತ್ತಿದೆ. ಶೃಂಗೇರಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಶಾರದಾ ಮಠದ ಗಾಂಧಿ ಮೈದಾನದ ಪಾರ್ಕಿಂಗ್ ಪ್ರದೇಶ, ಹಾಗೂ ಕಾಂಕ್ರೀಟ್ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ.
ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಗುಂಡಿಮಯ ರಸ್ತೆಗಳು ಜಲಾವೃತಗೊಂಡಿದ್ದು ಅವಾಂತರ ಸೃಷ್ಟಿಯಾಗಿವೆ. ಮೆಜೆಸ್ಟಿಕ್, ವಿಧಾನಸೌಧ, ಶಾಂತಿ ನಗರ, ಕೆ.ಆರ್. ಮಾರುಕಟ್ಟೆ, ರಿಚ್ಮಂಡ್ ವೃತ್ತ, ಎಂ.ಜಿ.ರೋಡ್, ಕಸ್ತೂರಬಾ ರಸ್ತೆ, ರಾಜಾಜಿನಗರ, ಮಲ್ಲೇಶ್ವರಂ, ವಿಜಯನಗರ, ಗಿರಿನಗರ, ಆರ್.ಆರ್.ನಗರ, ಮೈಸೂರು ರಸ್ತೆ, ನಯಂಡಹಳ್ಳಿ, ಕೆಂಗೇರಿ ಸೇರಿದಂತೆ ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಳೆ ಅವಾಂತರದ ನಡುವೆ ಹಲವೆಡೆ ವಿದ್ಯುತ್ ವ್ಯತ್ಯಯವುಂಟಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ.