ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಚುರುಕಾಗಿದ್ದು, ಭಾನುವಾರದಿಂದ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪೂರ್ವ ಮುಂಗಾರು ಮಾರುತಗಳು ಚುರುಕಾಗಿದ್ದು, ರಾಜ್ಯದ ಅನೇಕ ಕಡೆ ಮಳೆಯಾಗಿದೆ. ಬೆಂಗಳೂರಿನಲ್ಲಿ ಮಳೆಯಿಂದಾಗಿ ಮರದ ಕೊಂಬೆ ಮುರಿದು ಬಿದ್ದು ಮೂರು ವರ್ಷದ ಮಗು ಮೃತಪಟ್ಟಿದೆ. ಪುಲಿಕೇಶಿ ನಗರದಲ್ಲಿ ಮರ ಸಂಪೂರ್ಣವಾಗಿ ಉರುಳಿ ಬಿದ್ದು ತಂದೆಯೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದ ಮೂರು ವರ್ಷದ ರಕ್ಷಾ ಮೃತಪಟ್ಟಿದ್ದಾಳೆ. ಮಗುವಿನ ತಲೆಯ ಮೇಲೆ ಮರ ಬಿದ್ದು ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ತೀವ್ರ ಅಸ್ವಸ್ಥವಾಗಿ ಮೃತಪಟ್ಟಿದ್ದಾಳೆ.
ಬೆಂಗಳೂರು, ಚಿಕ್ಕಮಗಳೂರು, ಕೋಲಾರ, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ, ಬೀದರ್ ಸೇರಿದಂತೆ ಹಲವಡೆ ಮಳೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದ್ದು, ಆಲಿಕಲ್ಲು ಹೊಡೆತಕ್ಕೆ ತರಕಾರಿ, ಹಣ್ಣಿನ ಬೆಳೆಗಳಿಗೆ ಹಾನಿಯಾಗಿದೆ.
ಕೊಡಗು ಜಿಲ್ಲೆಯ ಕುಶಾಲನಗರ, ಪೊನ್ನಂಪೇಟೆ, ಕಾನೂರು ಸೇರಿ ಹಲವೆಡೆ ಮಳೆಯಾಗಿದೆ. ಯಲಹಂಕ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಕೆಲವು ಕಡೆ ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿರುವ ನೀರು ಹರಿದು ಸವರಾರು ಪರದಾಡಿದ್ದಾರೆ.
ದಕ್ಷಿಣ ಒಳನಾಡಿನ ವಿವಿಧೆಡೆ ಮಳೆಯ ಪ್ರಮಾಣ ಹೆಚ್ಚಾಗಲಿದ್ದು, ಉತ್ತರ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿಯೂ ಸೋಮವಾರದಿಂದ ನಾಲ್ಕೈದು ದಿನದಂತೆ ಸಾಧಾರಣ ಮಳೆ ಆಗಲಿದೆ. ಕೆಲವೆಡೆ ಗಾಳಿ, ಗುಡುಗು, ಮಿಂಚು ಸಹಿತ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.