ಹಳ್ಳಿಗಳಿಗೂ ರೈಲ್ವೆ ಯೋಜನೆ: ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ. ಸೋಮಣ್ಣ

ಕೊಪ್ಪಳ: ರೈಲ್ವೆ ಯೋಜನೆಗಳನ್ನು ಹಳ್ಳಿಗಳಿಗೂ ತಲುಪಿಸುವ ಚಿಂತನೆ ನಮ್ಮ ಸರ್ಕಾರದ್ದಾಗಿದೆ. ಅದಕ್ಕಾಗಿ ಪ್ರಧಾನ ಮಂತ್ರಿಗಳು ದೇಶದಲ್ಲಿ 7 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಹಳೆಯ ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಭಾರತ ಸರ್ಕಾರದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

 ಅವರು ಗುರುವಾರ ಕುಷ್ಟಗಿ ರೈಲು ನಿಲ್ದಾಣದಲ್ಲಿ ನೈಋತ್ಯ ರೈಲ್ವೆ ವಿಭಾಗದ ಗದಗ(ತಳಕಲ್ಲ) ಕುಷ್ಟಗಿ ಹೊಸ ರೈಲು ಮಾರ್ಗದ ಉದ್ಘಾಟನೆ ಹಾಗೂ ರೈಲು ಸಂಖ್ಯೆ. 17323 ಕುಷ್ಟಗಿ-ಎಸ್.ಎಸ್.ಎಸ್. ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಹಸಿರು ನಿಶಾನೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.

ವಾಜಪೇಯಿ ಅವರು ಪ್ರಧಾನಿಗಳಾಗಿದ್ದ ಸಮಯದಲ್ಲಿ ಅವರು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಒತ್ತು ನೀಡಿದರೆ ನರೇಂದ್ರ ಮೋದಿ ಅವರು ರೈಲ್ವೆ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ 45 ಸಾವಿರ ಕೋಟಿ ರೂ ರೈಲ್ವೆ ಯೋಜನೆಯನ್ನು ಕರ್ನಾಟಕದಲ್ಲಿ ಮಾಡುತ್ತಿದ್ದೇವೆ. 2014 ರಿಂದ 2024 ರವರೆಗೆ 5 ಲಕ್ಷ ಉದ್ಯೋಗ ರೈಲ್ವೆ ಇಲಾಖೆಯಲ್ಲಿ ಜನರಿಗೆ ನೀಡಲಾಗಿದೆ. ರೈಲ್ವೆ ಇಲಾಖೆಯಲ್ಲಿ ಕರ್ನಾಟಕದವರಿಗೆ ಉದ್ಯೋಗ ಸಿಗಲು ಅನುಕೂಲವಾಗಲು ಕನ್ನಡದಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ. ವಂದೇ ಭಾರತ 50 ಎಸಿ ಸ್ಲೀಪರ್ ಕೋಚ್ ಟ್ರೈನ್ ಗಳನ್ನು ಇನ್ನೂ ಒಂದೂವರೆ ತಿಂಗಳಲ್ಲಿ ದೇಶದಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದರು.

 2025-26ನೇ ಸಾಲಿನಲ್ಲಿ ಗದಗ-ವಾಡಿ ರೈಲು ಯೋಜನೆಗೆ 549.45 ಕೋಟಿ ರೂ ಹಣವನ್ನು ಇರಿಸಿದ್ದೇವೆ. ಗದಗ-ವಾಡಿ ಮಧ್ಯ ಒಟ್ಟು 27 ರೈಲು ನಿಲ್ದಾಣಗಳು ಬರುತ್ತವೆ. ಎಲ್ಲಾ ರೈಲು ನಿಲ್ದಾಣಗಳ ಅಭಿವೃದ್ಧಿಗೆ ನಮ್ಮ ಸರ್ಕಾರದ ಆದ್ಯತೆ ನೀಡಿದೆ. ಇಂದು ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ್ದು, ಪ್ರತಿದಿನ ಕುಷ್ಟಗಿ-ಹುಬ್ಬಳ್ಳಿ ಮಧ್ಯ ಈ ರೈಲು ಸಂಚರಿಸಲಿದೆ. ಟಿಕೆಟ್ ದರ 70 ರೂ ಇದ್ದು. ಬೆಳಿಗ್ಗೆ 7 ಗಂಟೆಗೆ ಕುಷ್ಟಗಿಯಿಂದ ಹೊರಟ ರೈಲು 10.40ಕ್ಕೆ ಹುಬ್ಬಳ್ಳಿ ತಲುಪಲಿದೆ ಮತ್ತೆ ಸಂಜೆ 5 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 8.30 ಕುಷ್ಟಗಿ ಬಂದು ತಲುಪಲಿದೆ ಇದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ಎಸ್ ತಂಗಡಗಿ ಮಾತನಾಡಿ, ಗದಗ-ವಾಡಿ ರೈಲು ಮಾರ್ಗದ ಬಹುದಿನಗಳ ಕನಸು ಈಗ ಈಡೇರಿದೆ ಎಂದರು.

ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಕುಷ್ಟಗಿ ಶಾಸಕ ದೊಡ್ಡನಗೌಡ ಹನುಮಗೌಡ ಪಾಟೀಲ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿದರು.

ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಸೇರಿದಂತೆ ಹಲವರು ಇದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read