ಶಿವಮೊಗ್ಗ: ಶಿವಮೊಗ್ಗ ಸಮೀಪದ ಗಾಜನೂರು ನವೋದಯ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದ್ದು, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳು 9ನೇ ತರಗತಿ ಮಕ್ಕಳ ಮೇಲೆ ರ್ಯಾಗಿಂಗ್ ನಡೆಸಿದ್ದಾರೆ ಎಂದು ಹೇಳಲಾಗಿದೆ. ಶಾಲೆಯಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗುತ್ತಿದ್ದು, ಮಕ್ಕಳು ಮತ್ತು ಪೋಷಕರು ರೋಸಿ ಹೋಗಿದ್ದಾರೆ.
ರ್ಯಾಗಿಂಗ್ ಹೆಸರಿನಲ್ಲಿ ಕಿರಿಯ ವಿದ್ಯಾರ್ಥಿಗಳ ಮೇಲೆ ಹಿರಿಯರು ದೌರ್ಜನ್ಯ ಎಸಗುತ್ತಿದ್ದಾರೆ. ಬಟ್ಟೆ ತೊಳೆಯುವುದು ಸೇರಿ ಇನ್ನಿತರ ಕೃತ್ಯಗಳನ್ನು ಮಾಡಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಕಿರಿಯ ವಿದ್ಯಾರ್ಥಿಗಳ ಬಳಿ ಇದ್ದ ಹಣ ಕಸಿದುಕೊಳ್ಳುವುದು ಮಾತ್ರವಲ್ಲದೆ ಪೋಷಕರಿಂದ ಹಣ ಪಡೆದು ನೀಡುವಂತೆ ಬೆದರಿಕೆ ಹಾಕುತ್ತಿರುವುದಾಗಿ ಆರೋಪಿಸಲಾಗಿದೆ.
ಈಗಾಗಲೇ ಜಿಲ್ಲಾ ಮಕ್ಕಳ ಸಹಾಯವಾಣಿ ಮತ್ತು ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿ ನವೋದಯ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದು, ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ತಾಜುದ್ದೀನ್ ಖಾನ್ ಹೇಳಿದ್ದಾರೆ.