ಬೆಂಗಳೂರು: ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ಖಂಡಿಸಿ ವಿಪಕ್ಷ ಬಿಜೆಪಿ ನಾಯಕರು ಸಿಎಂ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದು, ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಕರ್ನಾಟಕದ ಕಾರಾಗೃಹವೆಂದರೆ ಭಯೋತ್ಪಾದಕರಿಗೆ ಸ್ವರ್ಗದಂತಾಗಿದೆ. ಜೈಲಿನ ಒಳಗೆ ಮೊಬೈಲ್, ಟಿವಿ, ಎಣ್ಣೆ ಎಲ್ಲಾರೀತಿಯ ಸೌಲಭ್ಯಗಳನ್ನು ಕೊಡಲಾಗಿದೆ. ಕೈದಿಗಳಿಗೆ ರಾಜಾತಿಥ್ಯ ಒದಗಿಸುವಂತ ಕಾಂಗ್ರೆಸ್ ಸರ್ಕಾರ ನಮಗೆ ಬೇಡ, ಸಿಎಂ ಸಿದ್ದರಾಮಯ್ಯ ಮೊದಲು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಜೈಲಿನಲ್ಲಿ ರಾಜಾತಿಥ್ಯ ಒದಗಿಸುವುದೂ ನೀವೇ. ಅದನ್ನು ರೆಕಾರ್ಡ್ ಮಾಡಿ ವೈರಲ್ ಮಾಡಿಸುವುದೂ ನೀವೆ. ಜೈಲಿನಲ್ಲಿ ಸರ್ಕಾರದ ಒಂದು ಸ್ಕೀಂ ನಡೆದಿದೆ. ಎರಡು ಗುಂಪುಗಳಿವೆ ಎಂದು ಆರೋಪಿಸ್ದರು.
5 ಕೋಟಿ ವೆಚ್ಚದಲ್ಲಿ ಜೈಲುಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಒಂದು ಕ್ಯಾಮರಾ ಹಾಳಾಗಿರಬಹುದು ಉಳಿದ ನೂರಾರು ಕ್ಯಾಮರಾಗಳೂ ಕೆಟ್ಟು ಹೋಗಿರಲು ಸಾಧ್ಯವೇ? ಜೈಲಿನ ಅಕ್ರಮ ಚಟುವಟಿಕೆ ಗೊತ್ತಾಗಬಾರದೆಂದು ಇವರೇ ಆಫ್ ಮಾಡಿಸಿದ್ದಾರೆ. ಸರ್ಕಾರದ ಆದೇಶವಿಲ್ಲದೇ ಎಲ್ಲಾ ಕ್ಯಾಮರಾ ಆಫ್ ಆಗಲು ಸಾಧ್ಯವೇ? ಕಾಂಗ್ರೆಸ್ ಸರ್ಕಾರ ಉಗ್ರರಿಗೆ, ಅಪರಾಧಿಗಳಿಗೆ, ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗುವವರಿಗೆ, ಏರ್ ಫೋರ್ಟ್ ನಲ್ಲಿ ನಮಾಜ್ ಮಾಡುವವರಿಗೆ ರಕ್ಷಣೆ ನೀಡುತ್ತಿದೆ ಎಂದು ಕಿಡಿಕಾರಿದರು.
ದರ್ಶನ್ ಜೈಲಿನಲ್ಲಿ ಸಿಗರೇಟ್ ಸೇದಿದಕ್ಕೆ ಕಾಂಗ್ರೆಸ್ ನವರು ಸುಪ್ರೀಂ ಕೋರ್ಟ್ ಗೆ ಹೋದರು. ಈಗ ಜೈಲಿನಲ್ಲಿ ಇಷ್ಟೆಲ ಅವಾಂತರಗಳು ನಡೆಯುತ್ತಿದೆ. ಈಗ ಏನು ಮಾಡುತ್ತಿದ್ದೀರಾ? ಈಗ್ಯಾಕೆ ಸುಪ್ರೀಂ ಕೋರ್ಟ್ ಗೆ ಹೋಗುತ್ತಿಲ್ಲ ಎಂದು ಪ್ರಶ್ನಿಸಿದರು.
