ಶಾಲೆ ಆರಂಭವಾದ್ರೂ ಮಕ್ಕಳಿಗೆ ಪುಸ್ತಕ ನೀಡದ ಶಿಕ್ಷಣ ಇಲಾಖೆ; ಖಜಾನೆ ಖಾಲಿಯಾಗಿ ಕಸಕ್ಕೂ ತೆರಿಗೆ ಹಾಕಲು ಮುಂದಾದ ಸರ್ಕಾರ; ಆರ್.ಅಶೋಕ್ ವಾಗ್ದಾಳಿ

ಬೆಂಗಳೂರು: ಶಾಲೆಗಳು ಆರಂಭವಾದರೂ ಶಿಕ್ಷಣ ಇಲಾಖೆ ಈವರೆಗೆ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ನೀಡಿಲ್ಲ. ಪೋಷಕರು ಕೂಡ ಗೊಂದಲಕ್ಕೆ ಸಿಲುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ಶಿಕ್ಷಣ ಇಲಾಖೆ ಪಠ್ಯಪುಸ್ತಕಗಳನ್ನು ಸರಿಯಾದ ಸಮಯಕ್ಕೆ ಕೊಡದೆ ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಗೊಂದಲದಲ್ಲಿಟ್ಟಿದೆ. ಸರ್ಕಾರಿ ಶಾಲೆಗೆ ಮಕ್ಕಳು ಬರುವುದೇ ಕಡಿಮೆಯಾಗಿರುವಾಗ ಇಂತಹ ಸಮಸ್ಯೆ ಉಂಟಾಗಿದೆ. ಎಲ್ಲಾ ಉಚಿತ ಎಂದು ಈಗ ಯಾವುದೇ ವ್ಯವಸ್ಥೆಗಳನ್ನು ಮಾಡದಿರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಒಂದು ಕಡೆ ಗ್ಯಾರಂಟಿಗಳನ್ನು ನೀಡಿ, ಮತ್ತೊಂದು ಕಡೆ ಪುಸ್ತಕಗಳನ್ನು ನೀಡಿಲ್ಲ. ಸರ್ಕಾರಿ ಖಜಾನೆ ಖಾಲಿಯಾಗಿದ್ದು, ಕಸಕ್ಕೂ ತೆರಿಗೆ ಹಾಕಲು ಮುಂದಾಗಿದ್ದಾರೆ. ಕರ್ನಾಟಕ ಮಾಡಲ್‌ ಯಾವುದು ಎಂದು ತಿಳಿಯಲು ಆರ್ಥಿಕ ಇಲಾಖೆಯ ಒಂದು ವರ್ಷದ ಪ್ರಗತಿ ಕಾರ್ಡ್‌ ಬಿಡುಗಡೆಗೊಳಿಸಲಿ. ಸರ್ಕಾರ ಪಾಪರ್ ಆಗಿದೆಯಾ ಅಥವಾ ಹಣದ ಹೊಳೆ ಹರಿಯುತ್ತಿದೆಯಾ ಗೊತ್ತಾಗುತ್ತದೆ ಎಂದು ಹೇಳಿದರು.

ವಿಪಕ್ಷಗಳು ಸರ್ಕಾರದ ವಿರುದ್ಧ ಟೀಕೆ ಮಾಡಿದರೆ ಅಜ್ಞಾನ ಪ್ರದರ್ಶನ ಮಾಡುತ್ತಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ನವಲಗುಂದ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎನ್‌.ಎಚ್‌.ಕೋನರೆಡ್ಡಿ ಅವರು ತಮ್ಮ ಕ್ಷೇತ್ರದಲ್ಲಿ ಇನ್ನೂ ಕೆಲವು ರೈತರಿಗೆ ಪರಿಹಾರ ವಿತರಣೆ ಮಾಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ ಎಂದು ಆರ್‌.ಅಶೋಕ ದೂರಿದರು.

ರೈತರಿಗೆ ತಲುಪಬೇಕಾದ ಪರಿಹಾರದ ಹಣ ಇನ್ನೂ ತಲುಪಿಲ್ಲ ಎಂದು ಸ್ವತಃ ಕಾಂಗ್ರೆಸ್‌ ಶಾಸಕರೇ ಪತ್ರ ಬರೆದು ರಾಜ್ಯ ಸರ್ಕಾರದ ಬಂಡವಾಳ ಬಯಲು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 3,454 ಕೋಟಿ ರೂ. ಬರ ಪರಿಹಾರವನ್ನು ನೀಡಿದೆ. ಅದನ್ನು ರೈತರಿಗೆ ವಿತರಣೆ ಮಾಡಿ ಎಂದರೂ ಸಿಎಂ ಸಿದ್ದರಾಮಯ್ಯನವರ ಕೈಯಲ್ಲಿ ಆಗುತ್ತಿಲ್ಲ. ಬರ ಪರಿಹಾರ ರೈತರ ಕೈ ಸೇರುವಂತೆ ನೋಡಿಕೊಳ್ಳಲು ಆಗದಿದ್ದರೆ ಮುಖ್ಯಮಂತ್ರಿಯವರು ರಾಜೀನಾಮೆ ಕೊಡಲಿ, ರೈತರ ಬದುಕಿನ ಜೊತೆ ಚೆಲ್ಲಾಟವಾಡುವುದು ಬೇಡ ಎಂದು ಗುಡುಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read