ಪೊಲೀಸರ ಕೈಯಲ್ಲಿ ಪಿಸ್ತೂಲ್‌ ಇಲ್ಲ; ದರೋಡೆಕೋರರ ಕೈಯಲ್ಲಿ ಆಧುನಿಕ ಶಸ್ತ್ರಾಸ್ತ್ರ: ಬಸ್ಸು, ರೈಲು, ಕಾರಿನಲ್ಲಿ ಕಳ್ಳರ ಓಡಾಟ; ರಾಜ್ಯದಲ್ಲಿ ಜನರಿಗೆ ರಕ್ಷಣೆಯೇ ಇಲ್ಲ: ಆರ್. ಅಶೋಕ್ ವಾಗ್ದಾಳಿ

ಬೆಂಗಳೂರು: ರಾಜ್ಯದಲ್ಲಿ ದಿನಕ್ಕೊಂದು ದರೋಡೆ, ಬ್ಯಾಂಕ್ ಲೂಟಿ ಪ್ರಕರಣಗಳು ನಡೆಯುತ್ತಿವೆ. ಜನರು ಆತಂಕದಲ್ಲಿ ಬದುಕುತ್ತಿದ್ದಾರೆ. ಜನರ ರಕ್ಷಣೆಯನ್ನು ಮಾಡುವವರೇ ಇಲ್ಲ ಎಂದು ವಿಪಕ್ಷ ನಾಯಕ ಆರ್‌.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ್‌ನಲ್ಲಿ ಬ್ಯಾಂಕ್‌ನ ಹಣದ ದರೋಡೆ ಹಾಗೂ ಸಿಬ್ಬಂದಿ ಕೊಲೆ ನಡೆದಿದೆ. ಮಂಗಳೂರಿನಲ್ಲಿ ಹಾಲಿವುಡ್‌ ಸಿನಿಮಾ ಶೈಲಿಯಲ್ಲಿ 15 ಕೋಟಿ ರೂ. ಬ್ಯಾಂಕ್‌ ಹಣ ಲೂಟಿಯಾಗಿದೆ. ರಾಜ್ಯದ ಪೊಲೀಸರ ಬಗ್ಗೆ ಯಾರಿಗೂ ಭಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪೊಲೀಸ್‌ ಅಧಿಕಾರಿಗಳ ಮೇಲೆ ಎಷ್ಟು ಹಿಡಿತ ಇದೆ ಎಂದು ಇದರಿಂದ ತಿಳಿಯುತ್ತದೆ. ರಾಜ್ಯದ ಕಾನೂನು ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂದು ಗೊತ್ತಾಗಿದೆ ಎಂದರು.

ಬೇರೆ ರಾಜ್ಯಗಳಿಂದ ಕಳ್ಳರು ಬಂದು ದರೋಡೆ ಮಾಡಿಕೊಂಡು ಬಸ್ಸು, ರೈಲಿನಲ್ಲಿ ಹೋಗುತ್ತಿದ್ದಾರೆ. ಜನರು ಅವರ ರಕ್ಷಣೆಯನ್ನು ಅವರೇ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಪೊಲೀಸರ ಕೈಯಲ್ಲಿ ಪಿಸ್ತೂಲ್‌ ಇಲ್ಲ. ಆದರೆ ದರೋಡೆ ಮಾಡುವವರ ಕೈಯಲ್ಲಿ ಆಧುನಿಕ ಶಸ್ತ್ರಾಸ್ತ್ರಗಳಿವೆ ಎಂದರು.

ಲವ್‌ ಜಿಹಾದ್‌, ಕೋಮುಗಲಭೆ, ಹಸುಗಳ ಕೆಚ್ಚಲು ಕತ್ತರಿಸಿದ್ದು ಮೊದಲಾದ ಘಟನೆಗಳ ವಿರುದ್ಧ ಕಠಿಣ ಕ್ರಮ ವಹಿಸಲಿಲ್ಲ. ಪೊಲೀಸ್‌ ಇಲಾಖೆ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದು, ಅಧಿಕಾರಿಗಳು ಸಾಯುತ್ತಿದ್ದಾರೆ. ಇಷ್ಟಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಇಲಾಖೆಯ ಸಭೆ ಕರೆದು ಮಾತನಾಡಿಲ್ಲ. ಡಿ.ಕೆ.ಶಿವಕುಮಾರ್‌-ಸತೀಶ್‌ ಜಾರಕಿಹೊಳಿ ಗಲಾಟೆ, ಸಿಎಂ ನಿರ್ಗಮನ ಮೊದಲಾದ ರಾಜಕೀಯದಲ್ಲೇ ಸರ್ಕಾರ ಮುಳುಗಿದೆ. ಹೀಗಾಗಿ ಅಧಿಕಾರಿಗಳಿಗೆ ಕೆಲಸ ಮಾಡಲು ಆಸಕ್ತಿ ಇಲ್ಲ ಎಂದು ದೂರಿದರು.

ಕರ್ನಾಟಕ ದರೋಡೆಕೋರರ ಸ್ವರ್ಗವಾಗಿರುವುದರಿಂದ ಹೂಡಿಕೆದಾರರು ಮುಂದೆ ಬರುತ್ತಿಲ್ಲ. ಇದು ಪಶ್ಚಿಮ ಬಂಗಾಳದಂತೆಯೇ ಆಗುತ್ತಿದೆ. ಎಲ್ಲರೂ ಆತಂಕದಲ್ಲೇ ಬದುಕುತ್ತಿದ್ದಾರೆ ಎಂದರು.

ಇದೇ ವೇಳೆ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಎಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ, ಸಿಎಂ ಸಿದ್ದರಾಮಯ್ಯ ಎಷ್ಟು ಅನುದಾನ ನೀಡಿದ್ದಾರೆ ಎಂದು ಶ್ವೇತಪತ್ರ ಬಿಡುಗಡೆ ಮಾಡಲಿ. ಬಿಜೆಪಿ ಅವಧಿಯಲ್ಲಿ ಎಷ್ಟು ಸಾಲ ಮಾಡಲಾಗಿದೆ, ಕಾಂಗ್ರೆಸ್‌ ಅವಧಿಯಲ್ಲಿ 60 ವರ್ಷಗಳಲ್ಲಿ ಎಷ್ಟು ಸಾಲ ಮಾಡಲಾಗಿದೆ ಎಂದು ಕೂಡ ತಿಳಿಸಲಿ ಎಂದು ಸವಾಲೆಸೆದರು.

ಮುಡಾಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ನನಗೆ ಉತ್ತರ ನೀಡಿಲ್ಲ. ಲೋಕಾಯುಕ್ತ ಪೊಲೀಸರು ತನಿಖೆ ಮಾಡಲು ಆಸಕ್ತಿ ತೋರದೆ ಕ್ಲೀನ್‌ಚಿಟ್‌ ನೀಡಲು ಸಿದ್ಧತೆ ಮಾಡಿಕೊಂಡಿರುವಂತಿದೆ. ಜಾರಿ ನಿರ್ದೇಶನಾಲಯ ಮಧ್ಯವರ್ತಿಗಳ ಹಣವನ್ನು ವಶಕ್ಕೆ ಪಡೆದಿದೆ. ಆದರೆ ಲೋಕಾಯುಕ್ತ ಪೊಲೀಸರು ಏನೂ ಮಾಡಿಲ್ಲ. ಆದ್ದರಿಂದ ಸಿಬಿಐ ತನಿಖೆಗೆ ವಹಿಸಿ ಎಂದು ಒತ್ತಾಯಿಸಿದ್ದೇವೆ ಎಂದರು.

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು ಹೆಚ್ಚಿವೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಬದುಕಿಗೆ ಗ್ಯಾರಂಟಿ ಇಲ್ಲ. ಇಂತಹ ಪರಿಸ್ಥಿತಿಯಲ್ಲೂ ಸರ್ಕಾರ ದರ ಏರಿಕೆ ಮಾಡುತ್ತಿದೆ. ಈ ರೀತಿ ಮಾಡುವ ಬದಲು ಒಂದೇ ಬಾರಿಗೆ ದರ ಏರಿಕೆ ಮಾಡಲಿ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read