ಬೆಂಗಳೂರು: ಜಾತಿ ಗಣತಿ ವೈಜ್ಞಾನಿಕವಲ್ಲ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿ ಮಾಡಿಸಿರುವ ವರದಿ. ಇದು ರಾಜಕೀಯ ಪ್ರೇರ್ತವಾಗಿದ್ದು, ಯಾರೂ ಒಪ್ಪಲ್ಲ ಎಂದು ವಿಪಕ್ಷ ನಾಯಕ ಅರ್.ಅಶೋಕ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಜಾತಿ ಗಣತಿಯಲ್ಲಿ ಸಮೀಕ್ಷೆ ಮಾಡಿದ್ದವರು ಎಲ್ಲರ ಮನೆಗೆ ಹೋಗಿಲ್ಲ. ಸಿಎಂ ಸಿದ್ದರಾಮಯ್ಯ ಹೇಳಿ ಮಾಡಿಸಿರುವ ವರದಿ ಇದು. ನಾನು ಕೂಡ ಜಾತಿ ಗಣತಿ ಆಗಬೇಕು ಎನ್ನುತ್ತೇನೆ. ಆದರೆ ಯಾರಿಗೋ ಅನುಕೂಲ ಮಾಡಿಕೊಡಲು ಜಾತಿಜಾತಿಗಳ ನಡುವೆ ವಿಷಬೀಜ ಬಿತ್ತಲು ಈ ವರದಿ ರೂಪಿಸಲಾಗಿದೆ. ಕಾಂಗ್ರೆಸ್‌ಗೆ ಇದೇ ಬೇಕಾಗಿದೆ ಎಂದರು.
ಗುತ್ತಿಗೆದಾರರು ಕಮಿಷನ್ ಆರೋಪ ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಸಭೆ ಮಾಡಿ ಚರ್ಚಿಸಲಿ. ಯಾವ ಖಾತೆಗಳಲ್ಲಿ ಎಷ್ಟು ಲೂಟಿ ನಡೆಯುತ್ತಿದೆ ಎಂದು ಹೇಳಿದ್ದಾರೆ. ಕಮಿಷನ್ ಕೊಡುವವರಿಗೆ ಬಿಲ್ ಪಾವತಿಯಾಗುತ್ತದೆ. ಅಬಕಾರಿ ಇಲಾಖೆಯಲ್ಲಿ ಸಚಿವರ ಮಗ ಲೂಟಿ ಮಾಡುತ್ತಿದ್ದಾರೆ. ಸಚಿವರ ಮೇಲೆ ಇಷ್ಟೆಲ್ಲ ಆರೋಪ ಬಂದರೂ ಸಿಎಂ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಳ್ಳುತ್ತಾರೆ. ಭ್ರಷ್ಟಾಚಾರವೇ ನಮ್ಮ ಬಂಧು ಬಳಗ ಎಂದು ಕಾಂಗ್ರೆಸ್ ಘೋಷಣೆ ಮಾಡಿಕೊಳ್ಳಬೇಕು. ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡದೇ ಇರಲು ಕಮಿಷನ್ ವಸೂಲಿ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಸಿಎಂ ಆಗಲು ಕಮಿಷನ್ ಸಂಗ್ರಹಿಸುತ್ತಿದ್ದಾರೆ. ಸಚಿವರು ಕೂಡ ಸಿಎಂ ಆಗಲು ಕಮಿಷನ್ ಮಾಡುತ್ತಿದ್ದಾರೆ. ವಿಧಾನಸೌಧದ ಸಚಿವರ ಕಚೇರಿಗಳು ಕಲೆಕ್ಷನ್ ಸೆಂಟರ್ ಆಗಿದೆ. ಜೊತೆಗೆ ಜನರ ಮೇಲೆ 80 ಸಾವಿರ ಕೋಟಿ ರೂ. ತೆರಿಗೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಲೆ ಏರಿಕೆ ವಿರುದ್ಧ ಜೆಡಿಎಸ್‌ನ ಹೋರಾಟಕ್ಕೆ ಬಿಜೆಪಿಯ ಸಂಪೂರ್ಣ ಬೆಂಬಲವಿದೆ. ಯಾವ ಹೋರಾಟ ಒಟ್ಟಿಗೆ ಮಾಡಬೇಕು, ಪ್ರತ್ಯೇಕ ಮಾಡಬೇಕೆಂದು ಎಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚಿಸಲಾಗುವುದು. ನಮ್ಮ ಅವರ ನಡುವಿನ ಬಾಂಧವ್ಯಕ್ಕೆ ಯಾರೂ ಹುಳಿ ಹಿಂಡಲು ಸಾಧ್ಯವೇ ಇಲ್ಲ ಎಂದರು.