ಮಂಗಳೂರು: ಅಪರೂಪದ ಹೆಬ್ಬಾವು ಮಾರಾಟ ಜಾಲವೊಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಪತ್ತೆಯಾಗಿದ್ದು, ಪ್ರಕರಣ ಸಂಬಂಧ ಕಾಲೇಜು ವಿದ್ಯಾರ್ಥಿ ಸೇರಿ ನಾಲ್ವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಅಪರೂಪದ ಹೆಬ್ಬಾವುಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ಖಚಿತ ಮಾಹಿತಿ ಆಧರಿಸಿ ಮಂಗಳೂರು ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಮಂಗಳೂರಿನ ಅಶ್ವತ್ಥ ಕದ್ರಿ ಕಟ್ಟೆಯ ಬಳಿ ಆರೋಪಿಗಳು ಬಂದಿದ್ದ ವೇಳೆ ಹೆಬ್ಬಾವು ಖರೀದಿಸುವ ಸೋಗಿನಲ್ಲಿ ಇಬ್ಬರು ಅರಣ್ಯ ಇಲಾಖೆ ಸಿಬ್ಬಂದಿಗಳು ತೆರಳಿ ಆರೋಪಿಗಳನ್ನು ಮಾತನಾಡಿಸಿದ್ದಾರೆ. ಈ ವೇಳೆ ಆರೋಪಿ ವಿಶಾಲ್ ಎಂಬಾತ ಹೆಬ್ಬಾವು ತೋರಿಸಿ ೪೫ ಸಾವಿರಕ್ಕೆ ವ್ಯವಹಾರ ಕುದುರಿಸಿದ್ದಾನೆ. ಈ ವೇಳೆ ಅರಣ್ಯ ಇಲಾಖೆ ಇತರ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ವೇಳೆ ವಿಶಾಲ್ ಹಾವುಗಳು ತನ್ನದಲ್ಲ ಎಂದು ಅಪ್ರಾಪ್ತ ವ್ಯಕ್ತಿಯೊಬ್ಬ ತನಗೆ ಮಾರಾಟ ಮಾಡುಲು ನೀಡಿದ್ದ ಎಂದಿದ್ದಾನೆ.
ಆತನ ಜೊತೆ ಹೆಬ್ಬಾವು ಮಾರಾಟದ ಜಾಲವೇ ಇರುವುದು ಗೊತ್ತಾಗಿದೆ. ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಬಡಗ ಉಳಿಪ್ಪಾಡಿ ನಿವಾಸಿ ವಿಶಾಲ್ ಶೆಟ್ಟಿ (18) ಪೆಟ್ ಝೋನ್ ಮಾಲೀಕ ಇಬ್ರಾಹಿಂ ಶಕಿಲ್ ಇಸ್ಮಾಯಿಲ್ (35), ಪೆಟ್ ಝೋನ್ ಸಿಬ್ಬಂದಿ ಮೊಹಮ್ಮದ್ ಮುಸ್ತಫಾ (22) ಹಾಗೂ ಇನ್ನೋರ್ವ ಅಪ್ರಾಪ್ತ ಎಂದು ಗುರುತಿಸಲಾಗಿದೆ.