ಬೆಂಗಳೂರು: ಆಸ್ತಿ ಖರೀದಿ ಮಾರಾಟಗಾರರಿಗೆ ಸರ್ಕಾರ ಶಾಕ್ ನೀಡಿದೆ. 30 ಲಕ್ಷ ರೂ. ಮೇಲಿನ ಆಸ್ತಿ ಖರೀದಿಗೆ ಐಟಿಗೆ ವಿವರ ಸಲ್ಲಿಕೆ ಕಡ್ಡಾಯಗೊಳಿಸಲಾಗಿದೆ. ವಿವರ ಸಲ್ಲಿಸದ ನೋಂದಣಿ ರದ್ದುಪಡಿಸಲಾಗುವುದು ಎಂದು ಹೇಳಲಾಗಿದೆ.
ಹೌದು, ರಾಜ್ಯದಲ್ಲಿ ಇನ್ನು 30 ಲಕ್ಷ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಯಾವುದೇ ಸ್ಥಿರಾಸ್ತಿ ನೋಂದಣಿ ವೇಳೆ ಖರೀದಿ ಹಾಗೂ ಮಾರಾಟಗಾರರ ಪಾನ್ ಸಂಖ್ಯೆ ಸೇರಿದಂತೆ ಸಂಪೂರ್ಣ ವಿವರಗಳನ್ನು ಪ್ರತ್ಯೇಕ ನಮೂನೆಯಲ್ಲಿ ಸಹಿ ಸಹಿತ ಪಡೆದು ಆದಾಯ ತೆರಿಗೆ ಇಲಾಖೆಗೆ ಕಡ್ಡಾಯವಾಗಿ ಸಲ್ಲಿಸಬೇಕು. ಮಾಹಿತಿಯನ್ನು ಸಲ್ಲಿಸದಿದ್ದರೆ ಅಂತಹ ದಸ್ತಾವೇಜುಗಳು ನೋಂದಣಿಯಾಗುವುದಿಲ್ಲ.
ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕ ಇಲಾಖೆ ಆಯುಕ್ತರಾದ ಕೆ.ಎ. ದಯಾನಂದ್ ಅವರು ಈ ಕುರಿತಾಗಿ ಮೇ 16ರಂದು ಎಲ್ಲಾ ಜಿಲ್ಲಾ ನೋಂದಣಿ ಅಧಿಕಾರಿ ಹಾಗೂ ಉಪ ನೋಂದಣಿ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.
ಖರೀದಿದಾರ ಹಾಗೂ ಮಾರಾಟಗಾರನಿಂದ ಪಡೆದ ಆಸ್ತಿ ವಿವರ, ಪಾನ್ ಕಾರ್ಡ್, ಆಧಾರ್ ಕಾರ್ಡ್, ವಿಳಾಸ ಸೇರಿದಂತೆ ಪ್ರಮಾಣ ಪತ್ರವನ್ನು ದಸ್ತಾವೇಜು ಹಾಳೆಯ ಜೊತೆಗೆ ಸ್ಕ್ಯಾನ್ ಮಾಡಬೇಕು. ಈ ಸ್ಕ್ಯಾನ್ ಮಾಡಿದ ಹಾಳೆಯನ್ನು ಕಾವೇರಿ-2 ತಂತ್ರಾಂಶಕ್ಕೆ ಅಪ್ ಲೋಡ್ ಮಾಡಬೇಕು ಎಂದು ತಿಳಿಸಲಾಗಿದೆ.
ಈ ಮೂಲಕ ಯಾವುದೇ ಕ್ಷಣದಲ್ಲಿ ಬೇಕಾದರೂ ಐಟಿ ಅಧಿಕಾರಿಗಳು ಆಸ್ತಿ ವಹಿವಾಟು ಹಾಗೂ ವಹಿವಾಟು ನಡೆಸಿದವರ ವಿವರ ಪಡೆದುಕೊಳ್ಳಬಹುದು. ಇದುವರೆಗೆ ಆಸ್ತಿ ಖರೀದಿ ವೇಳೆ ಕಪ್ಪು ಹಣ ಬಿಳಿ ಮಾಡಿಕೊಳ್ಳುವ ದಂಧೆ ನಡೆಯುತ್ತಿತ್ತು. ಬೇನಾಮಿ ಆಸ್ತಿ ವಹಿವಾಟಿನಿಂದ ಖರೀದಿದಾರರು, ಮಾರಾಟಗಾರರು ವಂಚಿಸುತ್ತಿದ್ದರು. ಆದಾಯ ತೆರಿಗೆ ಇಲಾಖೆಗೆ ನೆರವಾಗಲು, ಅಕ್ರಮಕ್ಕೆ ತಡೆ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ. ಈ ನಿಯಮವನ್ನು ಹಿಂದೆಯೇ ಮಾಡಲಾಗಿದ್ದರೂ ನೋಂದಣಾಧಿಕಾರಿಗಳು ಪಾಲಿಸುತ್ತಿರಲಿಲ್ಲ. ಹೀಗಾಗಿ ಕಂದಾಯ ಇಲಾಖೆ ನಮ್ಮ ಜೊತೆ ಸಹಕರಿಸುತ್ತಿಲ್ಲ ಎಂದು ಐಟಿ ಅಧಿಕಾರಿಗಳು ದೂರಿದ್ದ ಹಿನ್ನಲೆಯಲ್ಲಿ ಐಟಿ ಇಲಾಖೆಗೆ ಸರಿಯಾದ ಮಾಹಿತಿ ಒದಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.