ಪಹಣಿಗಳಿಗೆ ಆಧಾರ ಜೋಡಣೆ ಸಂದರ್ಭದಲ್ಲಿ ಜಿಲ್ಲೆಯ ಸಾವಿರಾರು ಖಾತೆಗಳಲ್ಲಿ ವಾರಸುದಾರರ ಪೌತಿ ಎಂದು ಗುರುತಿಸಲಾದ ಜಮೀನುಗಳ ಪಹಣಿಗಳನ್ನು ವಾರಸುದಾರರಿಗೆ ಉಚಿತವಾಗಿ ಖಾತೆ ಮಾಡುವ ಉದ್ದೇಶದಿಂದ ಇ-ಪೌತಿ ಅಂದೋಲನವನ್ನು ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ಜುಲೈ 24, 2025 ರಿಂದ ಆಗಸ್ಟ್ 02, 2025 ರವರೆಗೆ 10 ದಿನಗಳ ವಿಶೇಷ ಇ-ಪೌತಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯ ಕಂದಾಯ ಸಚಿವರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇ-ಪೌತಿ ತಂತ್ರಾಂಶವನ್ನು ವಿಸ್ತರಿಸಲು ನಿರ್ದೇಶನ ನೀಡಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಪಹಣಿ ಪತ್ರಿಕೆಗಳಿಗೆ ಆಧಾರ ಜೋಡಣೆ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಸದರಿ ಕಾರ್ಯದಲ್ಲಿ ಈವರೆಗೂ ಶೇ. 87.33 ರಷ್ಟು ಪ್ರಗತಿಯನ್ನು ಸಾಧಿಸಲಾಗಿತ್ತದೆ ಎಂದು ಅವರು ತಿಳಿಸಿದ್ದಾರೆ.
ಪಹಣಿ ಪತ್ರಿಕೆಗಳಿಗೆ ಆಧಾರ ಜೋಡಣೆ ಮಾಡುವ ಅವಧಿಯಲ್ಲಿ ಪೌತಿ ಎಂದು ಗುರುತಿಸಲಾದ ಜಮೀನುಗಳ ಪಹಣಿಗಳನ್ನು ಇ-ಪೌತಿ ತಂತ್ರಾಂಶದ ಮೂಲಕ ವಾರಸುದಾರರಿಗೆ ಖಾತೆ ಬದಲಾವಣೆ ಮಾಡಲು ಸಂಬಂಧಿಸಿದ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿಗಳಲ್ಲಿ ಜುಲೈ 24, 2025 ರಿಂದ ಆಗಸ್ಟ್ 02, 2025 ರವರೆಗೆ 10 ದಿನಗಳ ವಿಶೇಷ ಇ-ಪೌತಿ ಆಂದೋಲನವನ್ನು ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ವಿಶೇಷ ಇ-ಪೌತಿ ಆಂದೋಲನದ ಸಂದರ್ಭದಲ್ಲಿ ಪೌತಿ ಅಂತಾ ಗುರುತಿಸಲಾದ ಪಹಣಿ ಪತ್ರಿಕೆಗಳ ಇ-ಪೌತಿ ಕಾರ್ಯಕ್ಕೆ ಅವಶ್ಯಕ ದಾಖಲೆಗಳೊಂದಿಗೆ ಸಾರ್ವಜನಿಕರು ಸಂಬಂಧಿಸಿದ ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿಯಲ್ಲಿ ಅರ್ಜಿಯನ್ನು ಸಲ್ಲಿಸಿ, ಉಚಿತವಾಗಿ ಖಾತೆ ಬದಲಾವಣೆ ಮಾಡಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಇ-ಪೌತಿ ಖಾತೆ ಅಂದೋಲನಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಅಥವಾ ಅಗತ್ಯ ದಾಖಲಾತಿಗಳ ಮಾಹಿತಿಗಾಗಿ ಧಾರವಾಡ ಜಿಲ್ಲಾಧಿಕಾರಿಗಳ ಕಾರ್ಯಾಲಯ ದೂರವಾಣಿ ಸಂಖ್ಯೆ: 0836-2445508, ಧಾರವಾಡ ಉಪವಿಭಾಗಾಧಿಕಾರಿಗಳ ಕಾರ್ಯಾಲಯ ದೂರವಾಣಿ ಸಂಖ್ಯೆ: 0836-2233860, ಧಾರವಾಡ ತಹಶೀಲ್ದಾರರ ಕಾರ್ಯಾಲಯ ದೂರವಾಣಿ ಸಂಖ್ಯೆ: 0836-2233822, ಅಳ್ನಾವರ ತಹಶೀಲ್ದಾರರ ಕಾರ್ಯಾಲಯ ದೂರವಾಣಿ ಸಂಖ್ಯೆ: 0836-2385544, ಹುಬ್ಬಳ್ಳಿ ನಗರ ತಹಶೀಲ್ದಾರರ ಕಾರ್ಯಾಲಯ ದೂರವಾಣಿ ಸಂಖ್ಯೆ: 0836-2358035, ಹುಬ್ಬಳ್ಳಿ ತಹಶೀಲ್ದಾರರ ಕಾರ್ಯಾಲಯ ದೂರವಾಣಿ ಸಂಖ್ಯೆ: 0836-2233844, ಕಲಘಟಗಿ ತಹಶೀಲ್ದಾರರ ಕಾರ್ಯಾಲಯ ದೂರವಾಣಿ ಸಂಖ್ಯೆ: 08370-284535, ಕುಂದಗೋಳ ತಹಶೀಲ್ದಾರರ ಕಾರ್ಯಾಲಯ ದೂರವಾಣಿ ಸಂಖ್ಯೆ: 08304-290239, ನವಲಗುಂದ ತಹಶೀಲ್ದಾರರ ಕಾರ್ಯಾಲಯ ದೂರವಾಣಿ ಸಂಖ್ಯೆ: 08380-229240, ಅಣ್ಣಿಗೇರಿ ತಹಶೀಲ್ದಾರರ ಕಾರ್ಯಾಲಯ ದೂರವಾಣಿ ಸಂಖ್ಯೆ: 8618442759 ಗೆ ಸಂಪರ್ಕಿಸಬಹುದು ಎಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.