ಇ- ಖಾತಾ ಗೊಂದಲದಲ್ಲಿದ್ದ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್

ಬೆಂಗಳೂರು: ಆಸ್ತಿ ಮಾಲೀಕರು ಇ- ಖಾತಾ ಪಡೆಯುವ ಮುನ್ನ ತಮ್ಮ ಖಾತೆಯಲ್ಲಿನ ತಪ್ಪು ಸರಿಪಡಿಸಿಕೊಳ್ಳಲು ನವೆಂಬರ್ 18ರಿಂದ ಅವಕಾಶ ನೀಡಲಾಗುವುದು ಎಂದು ಬಿಬಿಎಂಪಿ ಕಂದಾಯ ವಿಭಾಗದ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ 22 ಲಕ್ಷ ಆಸ್ತಿಗಳಿಗೆ ಈಗಾಗಲೇ ಕರಡು ಇ- ಖಾತಾ ಸಿದ್ಧಪಡಿಸಲಾಗಿದೆ. ಕೆಲವು ಖಾತೆಯಲ್ಲಿ ವಿಸ್ತೀರ್ಣ, ಹೆಸರು ಸೇರಿ ಇತರೆ ಅಂಶಗಳು ತಪ್ಪಾಗಿ ನಮೂದಾದ ಬಗ್ಗೆ ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ತಪ್ಪು ಮಾಹಿತಿಯನ್ನು ಸೂಕ್ತ ದಾಖಲೆ ನೀಡಿ ಸರಿಪಡಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಆಸ್ತಿ ಮಾಲೀಕರು ನಿಗದಿತ ವೆಬ್ಸೈಟ್ ನಲ್ಲಿ ಸ್ವಯಂ ತಾವೇ ತಪ್ಪು ಸರಿಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

ನಗರದಲ್ಲಿ 22 ಲಕ್ಷ ಆಸ್ತಿಗಳಲ್ಲಿ ಶೇಕಡ 90ರಷ್ಟು ಆಸ್ತಿಗಳ ಪರಿಶೀಲನೆ ನಡೆಸಿರಲಿಲ್ಲ. ಹೀಗಾಗಿ ಎಲ್ಲಾ ಆಸ್ತಿಗಳನ್ನು ಜೆಪಿಎಸ್ ಮ್ಯಾಪಿಂಗ್ ಮಾಡಲಾಗುತ್ತಿದೆ. ಎಲ್ಲಾ ಆಸ್ತಿಗಳ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಈಗ ನೀಡುತ್ತಿರುವ ಇ- ಖಾತಾದಲ್ಲಿ ಖಾತಾ ವಿವರಗಳಷ್ಟೇ ನಮೂದಾಗುತ್ತಿವೆ. ಜಿಪಿಎಸ್ ಮ್ಯಾಪಿಂಗ್, ಡಿಜಿಟಲೈಸ್ ಮಾಡಿದ್ದರಿಂದ ಇನ್ನು ಇ- ಖಾತಾದಲ್ಲಿ ಆಸ್ತಿಯ ನಕ್ಷೆ ಮತ್ತು ಆಸ್ತಿಯ ಮೇಲ್ಭಾಗದ ಭಾವಚಿತ್ರ ಕೂಡ ಮುದ್ರಣವಾಗಲಿದೆ ಎಂದು ತಿಳಿಸಿದ್ದಾರೆ.

ಇ- ಖಾತಾ ಸಂಬಂಧ ದೂರು ಸಲ್ಲಿಕೆಗೆ ಪ್ರತ್ಯೇಕ ವೆಬ್ಸೈಟ್ ರಚಿಸಲಾಗುವುದು. ಮೂರು ವಾರಗಳಲ್ಲಿ ಜನರ ಬಳಕೆಗೆ ನೀಡಲಾಗುವುದು. ಸದ್ಯ ಸಹಾಯವಾಣಿಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಖಾತೆ ಬದಲಾವಣೆ ಸೇರಿ ಇತರೆ ವಿಚಾರದಲ್ಲಿ ಸಮಸ್ಯೆ ತಪ್ಪಿಸಲು ಇ- ಖಾತಾ ಸೇಲ್ ಡೀಡ್ ಹೊಂದಿರುವ ಆಸ್ತಿ ಮಾಲೀಕರು 7 ದಿನಗಳಲ್ಲಿ ತಮ್ಮ ಆಸ್ತಿ ಮಾರಾಟ ಮಾಡುವ ವ್ಯವಸ್ಥೆ ತರಲಾಗಿದೆ. ಖರೀದಿದಾರರ ಮತ್ತು ಮಾರಾಟಗಾರರ ಆಧಾರ್ ಪ್ರಮಾಣ ಪತ್ರವನ್ನು ಇದಕ್ಕೆ ಕಡ್ಡಾಯವಾಗಿ ನೀಡಬೇಕಿದೆ.

ಇ- ಖಾತಾ ವಿತರಣೆಗೆ ಪ್ರತಿ ಆಸ್ತಿಗೆ ಒಂದು ಲಕ್ಷ ರೂ ಲಂಚ ಕೇಳಲಾಗುತ್ತಿದೆ ಎಂಬ ದೂರುಗಳು ಬಂದಿದೆ. ಇದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಇ- ಖಾತಾ ವ್ಯವಸ್ಥೆಯಲ್ಲಿ ಕಂದಾಯ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡದೆ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅಥವಾ ಆಸ್ತಿ ಮಾಲೀಕರು ಇ- ಖಾತಾ ಪಡೆಯುವಂತಹ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಸೈಬರ್ ಕೇಂದ್ರಗಳ ಮೂಲಕವೂ ಇ- ಖಾತಾ ನೀಡುವ ಚಿಂತನೆ ನಡೆಸಲಾಗಿದ್ದು, ಇನ್ನೊಂದು ತಿಂಗಳಲ್ಲಿ ಅವಕಾಶ ಕಲ್ಪಿಸಲಾಗುವುದು. ಇ- ಖಾತಾ ವಿತರಣೆಗೆ ಹಣ ಕೇಳುವ ಸಿಬ್ಬಂದಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಬಹುದು ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read