ಪ್ರಾಧ್ಯಾಪಕನಿಂದಲೇ ಘೋರ ಕೃತ್ಯ: ಆಸ್ತಿ ಆಸೆಗೆ ಪತ್ನಿ ಕೊಲೆ

ಮಂಡ್ಯ: ಆಸ್ತಿ ಆಸೆಗೆ ಪ್ರಾಧ್ಯಾಪಕನೊಬ್ಬ ಪತ್ನಿಯನ್ನು ಕೊಲೆ ಮಾಡಿದ ಘಟನೆ ಮಂಡ್ಯದ ವಿವಿ ನಗರ ಬಡಾವಣೆಯಲ್ಲಿ ನಡೆದಿದೆ.

ಖಾಸಗಿ ಕಾಲೇಜೊಂದರಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿರುವ ವ್ಯಕ್ತಿ ಆಸ್ತಿ ಆಸೆಯಿಂದ ದಿಂಬಿನಿಂದ ಉಸಿರುಗಟ್ಟಿಸಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ನಂತರ ಸಹಜ ಸಾವು ಎನ್ನುವಂತೆ ಬಿಂಬಿಸಿದ್ದಾನೆ. ತನಿಖೆಯಲ್ಲಿ ಈತನ ನಾಟಕ ಬಯಲಾಗಿ ಪೊಲೀಸರು ಬಂಧಿಸಿದ್ದಾರೆ.

ಟಿ.ಎನ್. ಸೋಮಶೇಖರ್(41) ಬಂಧಿತ ಆರೋಪಿ. ಪತ್ನಿ ಶ್ರುತಿ(32) ಅವರನ್ನು ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ. ಕೆಲವು ವರ್ಷಗಳ ಹಿಂದೆ ಅನಾರೋಗ್ಯದಿಂದ ಶ್ರುತಿ ಅವರ ತಂದೆ, ತಾಯಿ ಮೃತಪಟ್ಟಿದ್ದರು. 2018ರಲ್ಲಿ ಶ್ರುತಿ ಅವರ ಸಹೋದರಿ ಕೂಡ ಸಾವನ್ನಪ್ಪಿದ್ದರು. ಶ್ರುತಿ ಹೆಸರಿಗೆ 10 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿ ವರ್ಗಾವಣೆಯಾಗಿದ್ದು, ಮೈಸೂರಿನ ವಿವಿಧೆಡೆ ಕಮರ್ಷಿಯಲ್ ಬಿಲ್ಡಿಂಗ್ ಗಳು, ಮನೆ, ನಿವೇಶನಗಳು ಇದ್ದವು.

ಆರೋಪಿ ಅವುಗಳನ್ನು ಮಾರಾಟ ಮಾಡಲು ಶ್ರುತಿಗೆ ಒತ್ತಾಯಿಸುತ್ತಿದ್ದ. ಆದರೆ ಶ್ರುತಿ ನಿರಾಕರಿಸಿದ್ದರಿಂದ ಇಬ್ಬರ ನಡುವೆ ಜಗಳವಾಗಿ ಶ್ರುತಿ ಮಲಗಿದ್ದ ವೇಳೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಪಲ್ಸ್ ರೇಟ್ ಕಡಿಮೆಯಾಗಿ ಮೃತಪಟ್ಟಿರುವುದಾಗಿ ನಾಟಕವಾಡಿದ್ದಾನೆ.

ಶ್ರುತಿ ಚಿಕ್ಕಪ್ಪನಿಗೆ ಕರೆ ಮಾಡಿ ಸಹಜ ಸಾವು ಎಂದು ತಿಳಿಸಿದ್ದಾನೆ. ಅನುಮಾನಗೊಂಡ ಚಿಕ್ಕಪ್ಪ ಕುಮಾರಸ್ವಾಮಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಸಾಯಿಸಿರುವುದು ಗೊತ್ತಾಗಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read