ಶಿವಮೊಗ್ಗ : ಹೆಚ್ಚಿನ ಉದ್ಯೋಗಾವಕಾಶ ಮತ್ತು ಆರ್ಥಿಕತೆಗೆ ಉತ್ತಮ ಕೊಡುಗೆ ನೀಡುತ್ತಿರುವ ಎಂಎಸ್ಎಂಇ ಗಳ ಕಾರ್ಯಕ್ಷಮತೆ ಮತ್ತು ವೇಗ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಗಣೇಶ್ ಆರ್ ಹೇಳಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಮೊಗ್ಗ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿ.ಟಿ.ಪಿ.ಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಇವರ ಸಹಯೋಗದಲ್ಲಿ “ಎಂ.ಎಸ್.ಎA.ಇ.ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು” (ಆರ್‌ಎಎಂಪಿ) ಯೋಜನೆಯಡಿಯಲ್ಲಿ ಲೀನ್ ಯೋಜನೆ ಮತ್ತು ಝಡ್.ಇ.ಡಿ. ಹಾಗೂ ರಫ್ತು ಕುರಿತು ಗೋಪಾಲ ಗೌಡ ಬಡಾವಣೆಯ ಜಿಲ್ಲಾ ಔಷಧ ಭವನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ನಂತರ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುತ್ತಿರುವುದು ಎಂಎಸ್‌ಎAಇ(ಅತಿ ಸಣ್ಣ, ಸಣ್ಣ, ಮಧ್ಯಮ ಉದ್ಯಮಗಳು)ಗಳು. ಈ ಉದ್ಯಮಗಳ ಕಾರ್ಯಕ್ಷಮತೆ ಹೆಚ್ಚಿಸಲು ಮತ್ತು ವೇಗಗೊಳಿಸುವ ಉದ್ದೇಶದಿಂದ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಕಾಸಿಯಾ ಎಂಎಸ್‌ಎAಸಿ ಗಳಿಗೆ ಪೂರಕವಾಗಿ ಕೆಲಸ ಮಾಡುತ್ತಾ ಸಹಕರಿಸುತ್ತಿರುವುದು ಅಭಿನಂದನೀಯ.
ಸರ್ಕಾರ ಪ್ರತಿ 5 ವರ್ಷಕ್ಕೊಮ್ಮೆ ಕೈಗಾರಿಕಾ ನೀತಿ ತಂದು ಕೈಗಾರಿಕೆಗಳಿಗೆ ಹಲವಾರು ಉತ್ತೇಜನ, ಸೌಲಭ್ಯಗಳನ್ನು ನೀಡುತ್ತಿದ್ದು ಇದರ ಸದುಪಯೋಗವನ್ನು ಉದ್ಯಮಿಗಳು ಮಾಡಿಕೊಳ್ಳಬೇಕು. ಉದ್ಯಮಿಗಳು ಸರ್ಕಾರದ ವಿವಿಧ ಯೋಜನೆಗಳ ಉಪಯೋಗ ಪಡೆದು ಹೆಚ್ಚಿನ ಸಂಖ್ಯೆಯ ಕೈಗಾರಿಕೆಗಳ ಸ್ಥಾಪನೆ, ವಿಸ್ತರಣೆ, ಮಾರ್ಪಾಡು ಮಾಡಬಹುದು ಎಂದರು.
ಕೇಂದ್ರ ಸರ್ಕಾರ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಎಂಪ್ಲಾಯ್‌ಮೆAಟ್ ಲಿಂಕ್ಡ್ ಇನ್ಸೆಂಟಿಸ್ ಸ್ಕೀಂ ಎಂಬ ಮಹಾತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯಡಿ ಎರಡು ವರ್ಷಗಳ ಕಾಲ ಉದ್ಯೋಗ ನೀಡಿದವರಿಗೆ ಮತ್ತು ಉದ್ಯೋಗ ಪಡೆದವರಿಬ್ಬರಿಗೂ ಪ್ರೋತ್ಸಾಹಧನ ನೀಡುತ್ತದೆ ಎಂದು ತಿಳಿಸಿದರು.
ಸಿಡ್ಬಿ ಡಿಜಿಎಂ ಗುಣಶೇಖರನ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ಯುವ ಮತ್ತು ನವೋದ್ಯಮಿಗಳಿಗೆ ಕೈಗಾರಿಕೆಯಲ್ಲಿನ ವಿವಿಧ, ಹೊಸ ಹೊಸ ಅವಕಾಶಗಳ ಕುರಿತು ಮಾಹಿತಿ ಮತ್ತು ಅರಿವು ಮೂಡಿಸಲು ಸಹಕಾರಿಯಾಗಿದೆ. ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಕಾರ್ಯಕ್ರಮಗಳಸಲ್ಲಿ ಪಾಲ್ಗೊಂಡು ಸದುಪಯೋಗ ಪಡೆಯಬೇಕು. ವೇದಿಕೆ ಕಾರ್ಯಕ್ರಮದ ನಂತರ ಝಡ್.ಇ.ಡಿ. ಹಾಗೂ ರಫ್ತು ಕುರಿತು ಹೆಚ್ಚಿನ ಮಾಹಿತಿ ನೀಡಲಾಗುವುದು. ಈ ವಿಷಯದ ಕುರಿತು ಸಂದೇಹಗಳಿದ್ದರೆ ಕೇಳಿ ತಿಳಿದುಕೊಳ್ಳಬಹುದು ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಗೋಪಿನಾಥ್ ಬಿ. ಮಾತನಾಡಿ, 1949 ರಲ್ಲಿ ಸ್ಥಾಪನೆಯಾದ ಕಾಸಿಯಾ ನಿರಂತರವಾಗಿ ಎಂಎಸ್‌ಎAಇ ಗಳ ಶ್ರೇಯೋಭಿವೃದ್ದಿಗಾಗಿ ಕೆಲಸ ಮಾಡುತ್ತಿದೆ. ಕಾಸಿಯಾ ಎಂಎಸ್‌ಎAಇ ಗಳ ಕಣ್ಣು ಮತ್ತು ಕಿವಿ ಎಂದೇ ಹೇಳಬಹುದು. ಎಂಎಸ್‌ಎAಇ ಗಳಿಗೆ ಸಂಬAಧಿಸಿದAತೆ ಜಿಎಸ್‌ಟಿ, ಆರ್ಥಿಕತೆ, ತಾಂತ್ರಿಕ ವಿಷಯಗಳ ಕುರಿತು ಏನೇ ಸಮಸ್ಯೆಗಳಿದ್ದರೂ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಒದಗಿಸುತ್ತಾ ಬಂದಿದ್ದು ಕಾಸಿಯಾ ಶಿವಮೊಗ್ಗದಲ್ಲಿ ಲೀನ್ ಯೋಜನೆ ಮತ್ತು ಝಡ್.ಇ.ಡಿ. ಹಾಗೂ ರಫ್ತು ಕುರಿತು ಉದ್ಯಮಿಗಳಿಗೆ ಕಾರ್ಯಕ್ರಮ ಮಾಡುತ್ತಿರುವು ಸಂತಸದ ವಿಷಯ.
ಎಂಎಸ್‌ಎAಇ ಗಳು ಸಾಕಷ್ಟು ಉದ್ಯೋಗ ಸೃಷ್ಟಿಸಿದ್ದು ದೇಶದ ಜಿಡಿಪಿ ಗೆ ಶೇ. 29 ರಷ್ಟು ಕೊಡುಗೆ ನಿಡಿದ್ದು, ಸರ್ಕಾರ ತನ್ನ ಬಜೆಟ್‌ನಲ್ಲಿ ಎಂಎಸ್‌ಎAಇ ಗಳಿಗೆ ಪೂರಕವಾದ ಯೋಜನೆಗಳನ್ನು ನೀಡಿದೆ. ಎಂಎಸ್‌ಎAಇ ಗಳಿಗಾಗಿಯೇ ಸಿಡ್ಬಿ ಬ್ಯಾಂಕ್‌ನ್ನೇ ನೀಡಿ ಸಹಕರಿಸಿದೆ. ಜಿಲ್ಲೆಯಲ್ಲಿ ಕೈಗಾರಿಕಾಭಿವೃದ್ದಿ ಎಲ್ಲ ಸಂಘಗಳು ಕೆಲಸ ಮಾಡುತ್ತಿದ್ದು ಜಿಲ್ಲೆಯನ್ನು ಒಂದು ಉತ್ತಮ ಇಂಡಸ್ಟಿçಯಲ್ ಹಬ್ ಮಾಡಲು ಶ್ರಮಿಸುತ್ತಿವೆ.
ಕಳೆದ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ.7.8 ಗೆ ತಲುಪಿರುವುದು ಹೆಮ್ಮೆಯ ವಿಷಯವಾಗಿದ್ದು ಎಂಎಸ್‌ಎAಇ ಗಳ ಕೊಡುಗೆಯೂ ಇದೆ. ಭಾರತಕ್ಕೆ ಉತ್ತಮ ಭವಿಷ್ಯವಿದೆ. ಸರ್ಕಾರ ಉದ್ಯಮಿಗಳಿಗೆ ಹಲವಾರು ಯೋಜನೆಗಳನ್ನು ನೀಡಿದ್ದು ಸದ್ಬಳಕೆಯಾಗಬೇಕು ಎಂದರು.
ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷರಾದ ಬೆನಕಪ್ಪ ಮಾತನಾಡಿ, ಎಂಎಸ್‌ಎAಇ ಗಳಿಗೆ ಕಾಸಿಯ, ಡಿಐಸಿ ಸಹಕಾರ ಅತ್ಯುತ್ತಮವಾಗಿದೆ. ದೇಶ ಪ್ರಗತಿ ಪಥದಲ್ಲಿದೆ. ಅವಕಾಶಗಳು, ಸೌಲಭ್ಯಗಳು ಬಹಳ ಇವೆ. ರಫ್ತಿಗೆ ತುಂಬಾ ಅವಕಾಶಗಳಿವೆ, ಹೊಸ ತಂತ್ರಜ್ಞಾನ, ಆರ್ಥಿಕ ಸಹಕಾರಗಳೂ ಇದ್ದು ಸದ್ಬಳಕೆ ಮಾಡಿಕೊಳ್ಳಬೇಕು. ಸಣ್ಣ ಸಣ್ಣ ಯಶಸ್ಸು, ಸುಧಾರಣೆಗಳು ಅಭಿವೃದ್ಧಿಗೆ ಹಾದಿಯಾಗಿದ್ದು ಸರ್ಕಾರ ನೀಡಿರುವ ಬಹಳಷ್ಟು ಯೋಜನೆಗಳನ್ನು ಉಪಯೋಗಿಸಿಕೊಳ್ಳಬೇಕೆಂದರು.
ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷರಾದ ಜೋಯಿಸ್ ರಾಮಾಚಾರ್ ಮಾತನಾಡಿ, ಪ್ರತಿ ಜಿಲ್ಲೆಯಲ್ಲಿ ಈ ಕಾರ್ಯಕ್ರಮಗಳು ನಡೆಯುತ್ತಿದ್ದು ಯೋಜನೆಗಳ ಕುರಿತು ಅರಿವು ನೀಡುತ್ತಿದೆ. ಬ್ಯಾಂಕಿAಗ್ ವಲಯದಿಂದ ಸಾಕಷ್ಟು ಪ್ರಯೋಜನಗಳಿವೆ. ಇದೆ. ಲೀನ್ ಯೋಜನೆಯಿಂದಾಗಿ ಉತ್ಪಾದನೆ ಪ್ರಕ್ರಿಯೆ ವೆಚ್ಚ ಕಡಿಮೆ ಆಗುತ್ತಿದೆ. ಕೈಗಾರಿಕ ಬೆಳೆಯಬೇಕೆಂದರೆ ದೇಶೀಯ ಮಾರುಕಟ್ಟೆ ಜೊತೆಗೆ ವಿದೇಶೀ ಮಾರುಕಟ್ಟೆಯನ್ನು ಪ್ರವೇಶಿಸಬೇಕು. ವಿವಿಧ ಯೋಜನೆಗಳು, ವಿದೇಶಿ ಮಾರುಕಟ್ಟೆ ಮತ್ತು ರಫ್ತು ಕುರಿತು ಈ ಕಾರ್ಯಕ್ರಮದಲ್ಲಿ ಸಾಕಷ್ಟು ಮಾಹಿತಿ ಮತ್ತು ಸಹಕಾರ ದೊರೆಯಲಿದೆ ಎಂದರು.
ವಿ.ಟಿ.ಪಿ.ಸಿ. ಧಾರವಾಡ ಶಾಖಾ ಕಛೇರಿಯ ಸಹಾಯಕ ನಿರ್ದೇಶಕ ಟಿ. ಎಸ್. ಮಲ್ಲಿಕಾರ್ಜುನ ಮಾತನಾಡಿ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾಗಿದ್ದು ರಫ್ತು ನೋಡಲ್ ಏಜೆನ್ಸಿಯಾಗಿದೆ. ರಫ್ತಿಗೆ ಉತ್ತೇಜನ ನೀಡಲಿದೆ. 2024-25 ನೇ ಸಾಲಿನಲ್ಲಿ ನಮ್ಮ ರಾಜ್ಯ ಶೇ.40 ರಷ್ಟು ಐಟಿ ಸರ್ವಿಸ್ ರಫ್ತು ಮಾಡಿದೆ. ಇತರೆ ರಫ್ತಿನಲ್ಲಿ 4 ನೇ ಸ್ಥಾನದಲ್ಲಿದ್ದು ಎರಡನೇ ಸ್ಥಾನಕ್ಕೆ ಬರಲು ಪ್ರಯತ್ನ ಮಾಡಲಾಗುತ್ತಿದೆ. ಕಳೆದ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಿಂದ ರೂ. 443.7 ಕೋಟಿ ಮೊತ್ತದ ಸರಕು ರಫ್ತು ಮಾಡಲಾಗಿದೆ.
ವಿಟಿಪಿಸಿ ಯು ರಫ್ತುದಾರರಿಗೆ ಮಾರುಕಟ್ಟೆ ಅವಕಾಶ ನೀಡುತ್ತದೆ. ಮಾರುಕಟ್ಟೆ ಅಭಿವೃದ್ಧಿ ಸಹಾಯ ಯೋಜನೆಯಡಿ ಸಹಕರಿಸುತ್ತದೆ. ವಿದೇಶಗಳಲ್ಲಿ ನಡೆಯುವ ಟ್ರೇಡ್ ಫೇರ್‌ಗಳಲ್ಲಿ ಭಾಗವಹಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಸಿಡ್ಬಿ ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕ ಎಸ್.ಶ್ರೀಪತಿ, ಕಾಸಿಯಾ ಗೌರವ ಪ್ರಧಾನ ಕಾರ್ಯದರ್ಶಿ ಎಸ್. ಎಂ. ಹುಸೇನ್, ಗ್ರಾಮೀಣ ಜಂಟಿ ಕಾರ್ಯದರ್ಶಿ ಕೇಶವ ಮೂರ್ತಿ ಆರ್ (ಕಿರಣ್), ನಗರ ಜಂಟಿ ಕಾರ್ಯದರ್ಶಿ ಎಸ್. ವಿಶ್ವೇಶ್ವರಯ್ಯ ಇತರೆ ಉದ್ಯಮಿಗಳು ಹಾಜರಿದ್ದರು. ಕಾಸಿಯಾ ಉಪಾಧ್ಯಕ್ಷರು ನಿಂಗಣ್ಣ ಎಸ್. ಬಿರಾದರ ಸ್ವಾಗತಿಸಿದರು.