ಬೆಳಗಾವಿ: ಅಧಿಕಾರ ದುರ್ಬಳಕೆ ಮಾಡಿಕೊಂಡು ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕೆ.ಎಲ್.ಎನ್. ಮೂರ್ತಿ ಅವರನ್ನು ಅಮಾನತುಗೊಳಿಸಲಾಗಿದೆ.
ವಿಜಯಪುರ ಸ್ನಾತಕೋತ್ತರ ಕೇಂದ್ರದ ಇತಿಹಾಸ ವಿಭಾಗದ ಮುಖ್ಯಸ್ಥರಾಗಿರುವ ಪ್ರೊಫೆಸರ್ ಕೆ.ಎಲ್.ಎನ್. ಮೂರ್ತಿ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಸಂಶೋಧನಾ ವಿದ್ಯಾರ್ಥಿನಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಿಗೆ ದೂರು ನೀಡಿದ್ದರು.
ತಾವು ನೀಡಿದ ದೂರಿನ ಕುರಿತಾಗಿ ಲಿಖಿತ ಹೇಳಿಕೆ ಹಾಗೂ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಒದಗಿಸಿದ್ದರು. ವಿಶ್ವವಿದ್ಯಾಲಯದ ಆಂತರಿಕ ದೂರು ನಿವಾರಣೆ ಸಮಿತಿ ಈ ಬಗ್ಗೆ ವಿಚಾರಣೆ ನಡೆಸಿ ಆರೋಪಿತ ಪ್ರಾಧ್ಯಾಪಕರ ವಿರುದ್ಧ ಕಾನೂನು ಕ್ರಮಕ್ಕೆ ವರದಿ ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ಕುಲಸಚಿವ ಸಂತೋಷ ಕಾಮಗೌಡ ಅವರು ಅಮಾನತುಗೊಳಿಸಿ ಆದೇಶಿಸಿದ್ದಾರೆ.