ಬೆಂಗಳೂರು: UGCET/UGNEET-25 ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.
ಅಭ್ಯರ್ಥಿಗಳು ವೆಬ್ ಸೈಟ್ ನಲ್ಲಿನ ಲಿಂಕ್ ಮೂಲಕ ಫಲಿತಾಂಶ ಪಡೆಯಬಹುದು.
ಆಕ್ಷೇಪಣೆಗಳು ಇದ್ದಲ್ಲಿ ಇ- ಮೇಲ್ ಮೂಲಕ ಆಗಸ್ಟೆ 2ರಂದು ಬೆಳಿಗ್ಗೆ11ಗಂಟೆ ಒಳಗೆ ಕಳುಹಿಸಬೇಕು.
ಇ- ಮೇಲ್ ವಿಳಾಸ: keauthority-ka@nic.in
ಅಂತಿಮ ಫಲಿತಾಂಶ ಪ್ರಕಟಣೆಯ ನಂತರ ವೈದ್ಯಕೀಯ ಕೋರ್ಸ್ ಹೊರತುಪಡಿಸಿ ಕೃಷಿ, ಇಂಜಿನಿಯರಿಂಗ್ ಮೊದಲಾದ ಕೋರ್ಸುಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು.
ರಾಷ್ಟ್ರಮಟ್ಟದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಹೋಮಿಯೋಪತಿ ಕೋರ್ಸುಗಳ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಎನ್ನುವ ಪ್ರಕಟವಾಗದ ಕಾರಣ ಆ ಕೋರ್ಸ್ ಗಳ ಪ್ರವೇಶಕ್ಕೆ ಸದ್ಯಕ್ಕೆ ರಾಜ್ಯದಲ್ಲಿ ಅವಕಾಶ ಇರುವುದಿಲ್ಲ. ಅಲ್ಲಿ ಫಲಿತಾಂಶ ಪ್ರಕಟವಾದ ಬಳಿಕ ಕೋರ್ಸ್ ಗಳ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗುವುದು.
ಸಿಇಟಿ ಸೀಟು ಹಂಚಿಕೆಯ ನಂತರ ಅಭ್ಯರ್ಥಿಗಳು ತಮಗೆ ದೊರೆತ ಸೀಟಿನ ಬಗ್ಗೆ ಚಾಯ್ಸ್ ನೀಡುವ ಮೂಲಕ ತಮ್ಮ ಇಚ್ಛೆಯನ್ನು ತಿಳಿಸಬೇಕು. ಒಂದು ವೇಳೆ ಚಾಯ್ಸ್ ದಾಖಲಿಸದೆ ಇದ್ದಲ್ಲಿ ಅಂತವರನ್ನು ನಂತರದ ಸುತ್ತಿನಲ್ಲಿ ಸೀಟು ಹಂಚಿಕೆಗೆ ಪರಿಗಣಿಸುವುದಿಲ್ಲ. ಅಲ್ಲದೆ ಅವರನ್ನು ಇಡೀ ಪ್ರಕ್ರಿಯೆಯಿಂದ ಹೊರಹಾಕಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಚಾಯ್ಸ್ -1 ಮತ್ತು ಚಾಯ್ಸ್ -2 ದಾಖಲಿಸಿದ ನಂತರ ಬದಲಾವಣೆಗೆ ಅವಕಾಶ ಇರುವುದಿಲ್ಲ. ಆದರೆ ಚಾಯ್ಸ್ 3 ಮತ್ತು ಚಾಯ್ಸ್ 4 ದಾಖಲಿಸಿದವರು ನಿಗದಿತ ಕೊನೆ ದಿನಾಂಕದೊಳಗೆ ಪುನಃ ವ್ಯವಸ್ಥೆಯೊಳಗೆ ಬಂದು ಚಾಯ್ಸ್ 1 ಅಥವಾ ಚಾಯ್ಸ್ 2 ದಾಖಲಿಸಲು ಈ ಬಾರಿ ಹೊಸದಾಗಿ ಅವಕಾಶ ನೀಡಲಾಗಿದೆ.