ಬೆಂಗಳೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಡಿಸೆಂಬರ್ 16ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆಯಲಿರುವ ಆದಿ ಜಗದ್ಗುರು ಶಿವರಾತ್ರೀಶ್ವರ ಸ್ವಾಮೀಜಿಗಳ 1066ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಡಿಸೆಂಬರ್ 16ರಿಂದ 21ರವರೆಗೆ ಸುತ್ತೂರು ಮಠದ ಆದಿ ಜಗದ್ಗುರು ಶಿವರಾತ್ರೀಶ್ವರ ಶ್ರೀಗಳ ಜಯಂತಿ ಮಹೋತ್ಸವ ಆಯೋಜಿಸಲಾಗಿದೆ. ಮಳವಳ್ಳಿಯ ಮುನ್ಸಿಪಲ್ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗವಹಿಸಲಿದ್ದಾರೆ.
ಡಿಸೆಂಬರ್ 16ರಂದು ಮಧ್ಯಾಹ್ನ 2.10ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ರಾಷ್ಟ್ರಪತಿಗಳು ನಂತರ ಹೆಲಿಕಾಪ್ಟರ್ ನಲ್ಲಿ ಮಳವಳ್ಳಿಗೆ ತೆರಳಲಿದ್ದಾರೆ. ಸಂಜೆ 5:25 ಕ್ಕೆ ಮಳವಳ್ಳಿಯಿಂದ ಮೈಸೂರುಗೆ ಹಿಂತಿರುಗಿ ರಾತ್ರಿ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಡಿಸೆಂಬರ್ 17ರಂದು ಬೆಳಿಗ್ಗೆ 9:25ಕ್ಕೆ ಮೈಸೂರಿನಿಂದ ತಿರುಪತಿಗೆ ತೆರಳಲಿದ್ದಾರೆ. ರಾಷ್ಟ್ರಪತಿಗಳ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಕೈಗೊಂಡಿದೆ.
