ಬೆಂಗಳೂರು: ರಾಜ್ಯದಲ್ಲಿ ಮುಂಗಾರುಪೂರ್ವ ಮಳೆಯ ಅಬ್ಬರ ಮುಂದುವರೆದಿದ್ದು, ಸಿಡಿಲಬ್ಬರದ ಮಳೆಗೆ ಭಾನುವಾರ ಇಬ್ಬರು ಸಾವನ್ನಪ್ಪಿದ್ದಾರೆ.
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ತೆಲಗಿ ಗ್ರಾಮದಲ್ಲಿ ಭಾನುವಾರ ಸಂಜೆ ಹೊಲದಲ್ಲಿ ಆಕಳು ಮೇಯಿಸುತ್ತಿದ್ದ ವೇಳೆ ಸಿಡಿಲು ಬಡಿದು ಕೂಲಿ ಕಾರ್ಮಿಕ ಚನ್ನಗಿರಿ ಹಾಲೇಶಪ್ಪ(48) ಸಾವನ್ನಪ್ಪಿದ್ದಾರೆ.
ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕೆ. ಗುಡದಿನ್ನಿ ಗ್ರಾಮದ ಹೊರವಲಯದಲ್ಲಿ ಸಿಡಿಲು ಬಡಿದು ಸಾಯಣ್ಣ ಯಾದವ(55) ಎಂಬುವರು ಮೃತಪಟ್ಟಿದ್ದಾರೆ. ಭಾನುವಾರ ಮಧ್ಯಾಹ್ನ ಅಮಾವಾಸ್ಯೆ ನಿಮಿತ್ತ ತಮ್ಮ ಜಮೀನಿನಲ್ಲಿರುವ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತಾಯಿ ಲಕ್ಷ್ಮಮ್ಮ ಅವರೊಂದಿಗೆ ತೆರಳಿದ್ದ ವೇಳೆಯಲ್ಲಿ ಸಿಡಿಲು ಬಡಿದಿದೆ. ಈ ವೇಳೆ ಅವರೊಂದಿಗೆ ಇದ್ದ ಲಕ್ಷ್ಮಮ್ಮ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ಭಾನುವಾರ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮಳೆಯಾಗಿದೆ.