ಅಕಾಲಿಕವಾಗಿ ಮೃತಪಟ್ಟ ಪುತ್ರನ ಶವದೆದುರು ಗೃಹಲಕ್ಷ್ಮಿ ಯೋಜನೆ ಪ್ರಸ್ತಾಪಿಸಿ ರೋದಿಸಿದ ತಾಯಿಗೆ ಸಿಎಂ ಸಾಂತ್ವನ

ಅನಾರೋಗ್ಯದಿಂದ ಅಕಾಲಿಕವಾಗಿ ನಿಧಾನರಾದ ಪುತ್ರನ ಶವದ ಎದುರು ಗೃಹಲಕ್ಷ್ಮಿ ಯೋಜನೆ ಪ್ರಸ್ತಾಪಿಸಿ ಕಣ್ಣೀರಿಟ್ಟಿದ್ದ ತಾಯಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂತ್ವನ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ವಿಶ್ವನಾಥ(34) ಅನಾರೋಗ್ಯದಿಂದ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದು, ಪುತ್ರನ ಅಂತ್ಯ ಸಂಸ್ಕಾರ ನೆರವೇರಿಸಲು ಹಣವಿಲ್ಲದೆ ತಾಯಿ ನೀಲವ್ವ ಕಣ್ಣೀರಿಟ್ಟಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯ ಸ್ವಯಂಸೇವಕರು ಅಂತಿಮ ವಿಧಿ ವಿಧಾನ ನೆರವೇರಿಸಿಕೊಟ್ಟಿದ್ದಾರೆ.

ಪುತ್ರನ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ತಾಯಿ ನೀಲವ್ವ ಗೋಳಾಡುತ್ತಾ, ನೀ ಬದುಕಲು ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಬರುತ್ತೆ ಬಿಡು ಎಂದು ಮಗ ಸಾಯುವ ಮುನ್ನ ಹೇಳಿದ್ದ ಎಂದು ಪುತ್ರನ ಶವದ ಎದುರು ಕಣ್ಣೀರು ಹಾಕಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದವರೊಬ್ಬರು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿತ್ತು.

ವಿಡಿಯೋ ವೀಕ್ಷಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮರಕುಂಬಿ ಗ್ರಾಮಕ್ಕೆ ಆಪ್ತ ಸಹಾಯಕನನ್ನು ಕಳುಹಿಸಿ ಗೃಹಲಕ್ಷ್ಮಿ ಯೋಜನೆಯ ಒಂದು ವರ್ಷದ ಹಣ 24 ಸಾವಿರ ರೂಪಾಯಿಗಳನ್ನು ನೀಲವ್ವ ಅವರಿಗೆ ತಲುಪುವಂತೆ ಮಾಡಿದ್ದಾರೆ. ಅವರಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಸಾಂತ್ವನ ಹೇಳಿದ್ದಾರೆ.

“ಅನಾರೋಗ್ಯದಿಂದ ಅಕಾಲಿಕ ಮರಣಕ್ಕೆ ತುತ್ತಾದ ಈ ಬಡತಾಯಿಯ ಮಗನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

‘ಗೃಹಲಕ್ಷ್ಮಿ ಯೋಜನೆ ದುಡ್ಡು ನಿನಗೆ ಬರುತ್ತೆ, ನಾನಿಲ್ಲ ಎಂದು ಚಿಂತಿಸಬೇಡ’ ಎಂದು ಮಗನ ಮಾತನ್ನು ನೆನಪು ಮಾಡಿಕೊಂಡು ಆತನ ಶವದೆದುರು ತಾಯಿ ರೋದಿಸುತ್ತಿರುವುದನ್ನು ನೋಡಿ ಎದೆ ಭಾರವಾಯಿತು.

ಯಾವ ತಾಯಿಗೂ ಎದೆಯೆತ್ತರಕ್ಕೆ ಬೆಳೆದ ಮಗನ ಚಿತೆಗೆ ಅಗ್ನಿಸ್ಪರ್ಶ ಮಾಡುವ ಸ್ಥಿತಿ ಬಾರದಿರಲಿ.

ನಾವು ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದ ದಿನದಿಂದ ಇಂದಿನ ವರೆಗೆ ಕೆಲವರಿಂದ ಅಪಪ್ರಚಾರ, ಟೀಕೆ, ವ್ಯಂಗ್ಯಗಳು ವ್ಯಕ್ತವಾಗುತ್ತಲೇ ಇದೆ, ಇದಾವುದಕ್ಕೂ ನಾನು ತಲೆಕೆಡಿಕೊಂಡಿಲ್ಲ. ಕಾರಣ ಇಂತಹ ಲಕ್ಷಾಂತರ ಬಡತಾಯಂದಿರಿಗೆ ನಮ್ಮ ಯೋಜನೆ ಮೂರು ಹೊತ್ತು ನೆಮ್ಮದಿಯ ಅನ್ನ ನೀಡಿ ಬದುಕಿಗೆ ಆಧಾರವಾಗಿದೆ. ಬಡತನ, ಹಸಿವು, ಅನಾಥಭಾವ ಅನುಭವಿಸಿದವರಿಗಷ್ಟೇ ಅದರ ನೋವು, ಹತಾಶೆ ಅರಿವಾಗಲು ಸಾಧ್ಯ.

ಈ ತಾಯಿಯ ಜೊತೆ ನಮ್ಮ ಸರ್ಕಾರ ಇದೆ, ಮಗನ ಸಾವಿನ ದುಃಖದಿಂದ ಆದಷ್ಟು ಬೇಗ ಹೊರಬರಲಿ ಎಂದು ಹಾರೈಸುತ್ತೇನೆ.” ಎಂದು ಸಿಎಂ ತಿಳಿಸಿದ್ದಾರೆ.

https://twitter.com/siddaramaiah/status/1759546891002646629

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read