ಮೈಸೂರು: ನಾಡ ಹಬ್ಬ ದಸರಾ ಉದ್ಘಾಟಕರನ್ನಾಗು ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ವಿಚಾರ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ನಡುವೆ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿ ಏನಲ್ಲ ಎಂದು ಹೇಳಿಕೆ ನೀಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಯೂ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಮಹಾರಾಣಿ ಪ್ರಮೋದಾದೇವಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಪ್ರಮೋದಾದೇವಿ, ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿದ್ದು. ದೇವಸ್ಥಾನ ಹಿಂದೂ ಧಾರ್ಮಿಕ ಆಚರಣೆಯಲ್ಲಿಯೇ ನಡೆಯುತ್ತಿದೆ. ಚಾಮುಂಡಿ ಹಿಂದೂ ದೇವರು. ಯದುವಂಶದ ಮನೆ ದೇವರು. ಯದುವಂಶಕ್ಕೆ ಚಾಮುಂಡಿದೇವಿ ಧಾರ್ಮಿಕ ತಾಯಿ ಇದ್ದಂತೆ ಎಂದು ತಿಳಿಸಿದ್ದಾರೆ.
ಎಲ್ಲವನ್ನೂ ನಾನು ಪತ್ರದಲ್ಲಿಯೇ ಸ್ಪಷ್ಟವಾಗಿ ತಿಳಿಸಿದ್ದೇನೆ. ರಾಜಕಾರಣಿಗಳು ಏನೂ ಬೇಕಾದರೂ ಹೇಳಲಿ. ರಾಜಕಾರಣಿಗಳು ಹೇಳಿದ ತಕ್ಷಣ ಎಲ್ಲವೂ ಆಗಲ್ಲ ಎಂದು ತಿರುಗೇಟು ನೀಡಿದರು.
ದೇವಸ್ಥಾನದ ವಿಚಾರದಲ್ಲಿ ಕೋರ್ಟ್ ನಲ್ಲಿ ಹೋರಾಟ ನಡೆಯುತ್ತಿದೆ. ಪ್ರಾಧಿಕಾರ ರಚನೆ ಆದರೂ ಅದು ಅಧಿಕೃತವಲ್ಲ. ಕೋರ್ಟ್ ಆದೇಶ ಬಂದ ಬಳಿಕ ಎಲ್ಲವೂ ಸ್ಪಷ್ಟವಾಗುತ್ತದೆ. 70 ವರ್ಷಗಳಿಂದ ಈ ಹೋರಾಟ ನ್ಯಾಯಾಲಯದಲ್ಲಿದೆ. ದೇವಸ್ಥಾನವನ್ನು ರಾಜಕೀಯಕ್ಕೆ ಬಳಸಿಕೊಂಡೊದ್ದಕ್ಕೆ ಬೇಸರವಿದೆ ಎಂದು ಹೇಳಿದರು.