ಬೆಂಗಳೂರು: ಮನೆ ಕೆಲಸದ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣದ ಅಪರಾಧಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನಿಗೆ ಅರ್ಹರಲ್ಲ ಎಂದು ಹೈಕೋರ್ಟ್ ನಲ್ಲಿ ರಾಜ್ಯ ಸರ್ಕಾರ ಬಲವಾದ ವಾದ ಮಂಡಿಸಿದೆ.
ಅತ್ಯಾಚಾರ ಪ್ರಕರಣದಲ್ಲಿ ಜೀವನ ಪರ್ಯಂತ ಜೈಲು ಶಿಕ್ಷೆ ವಿಧಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮತ್ತು ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ ಕ್ರಿಮಿನಲ್ ಮೇಲ್ಮನವಿ ಅರ್ಜಿ ವಿಚಾರಣೆ ಸೋಮವಾರ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಮತ್ತು ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ಪೀಠದಲ್ಲಿ ನಡೆದಿದೆ.
ಎಸ್ಐಟಿ ಪರ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್, ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ವಿಳಂಬ ಮಾಡಲು ಪ್ರಜ್ವಲ್ ರೇವಣ್ಣ 10 -12 ಬಾರಿ ಪ್ರಯತ್ನಿಸಿದ್ದಾರೆ. ಅವರ ಕೋರಿಕೆಯ ಮೇಲೆ ಹಲವು ಬಾರಿ ವಿಚಾರಣೆ ಮುಂದೂಡಲಾಗಿದೆ. ಅದಕ್ಕಿಂತ ಮೊದಲು ವಿದೇಶಕ್ಕೆ ಹೋಗಿ ತನಿಖೆಗೆ ಸವಾಲು ಎಸೆದಿದ್ದರು. ಲೈಂಗಿಕ ಕೃತ್ಯ ಸೆರೆ ಹಿಡಿದಿದ್ದ ಫೋನ್ ತನಿಖಾ ಅಧಿಕಾರಿಗೆ ಒಪ್ಪಿಸಿಲ್ಲ. ಜರ್ಮನಿಯಲ್ಲಿ ಫೋನ್ ಕಳೆದು ಹೋಗಿದೆ ಎಂದು ಹೇಳಿದ್ದಾರೆ. ಇದು ಅವರ ನಡತೆಯಾಗಿದೆ ಎಂದು ತಿಳಿಸಿದ್ದಾರೆ.
ಕೃತ್ಯದ ಬಗ್ಗೆ ಮಾಹಿತಿ ನೀಡಲು ಬಂದಿದ್ದ ಸಂತ್ರಸ್ತೆಗೆ ಅಂದಿನ ಜಿಲ್ಲಾಧಿಕಾರಿ ಸೇರಿದಂತೆ ಯಾರೂ ನೆರವು ನೀಡಿಲ್ಲ. ಪ್ರಜ್ವಲ್ ರೇವಣ್ಣ ಕುಟುಂಬ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಬಲಾಢ್ಯವಾಗಿದೆ. ಹಾಲಿ ಪ್ರಕರಣದಲ್ಲಿ ಪ್ರಜ್ವಲ್ ಗೆ ಜಾಮೀನು ಮಂಜೂರು ಮಾಡಿದರೆ ಸಂತ್ರಸ್ತೆಯನ್ನು ಅಪಹರಿಸಿದ ಆರೋಪ ಎದುರಿಸುತ್ತಿರುವ ಆತನ ತಂದೆ ಹೆಚ್.ಡಿ. ರೇವಣ್ಣ, ತಾಯಿ ಭವಾನಿ ರೇವಣ್ಣ ಅವರ ಜಾಮೀನು ಕೋರಿಕೆ ಮೇಲೆ ಆದೇಶ ಪ್ರಭಾವ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಅವರು ಜಾಮೀನಿಗೆ ಅರ್ಹರಲ್ಲ, ಹೀನ ಕೃತ್ಯ ಎಸಗಿರುವ ಅವರಿಗೆ ಜಾಮೀನು ಮಂಜೂರು ಮಾಡಿ ಸಮಾಜದ ಮುಖ್ಯ ವಾಹಿನಿಗೆ ಬರಲು ಅವಕಾಶ ನೀಡಿದರೆ ಸಮಾಜಕ್ಕೆ ಯಾವ ಸಂದೇಶ ಹೋಗುತ್ತದೆ? ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಜಾಮೀನಿಗೆ ಅರ್ಹರಲ್ಲ, ವಿಚಾರಣಾ ನ್ಯಾಯಾಲಯದ ತೀರ್ಪಿನಲ್ಲಿ ದೋಷ ಹುಡುಕಬಾರದು ಎಂದು ಸರ್ಕಾರಿ ಅಭಿಯೋಜಕರು ವಾದ ಮಂಡನೆ ವೇಳೆ ಹೇಳಿದ್ದಾರೆ.
