ಚೆನ್ನೈ: ಖ್ಯಾತ ನೃತ್ಯ ನಿರ್ದೇಶಕ ಹಾಗೂ ನಟ ಪ್ರಭುದೇವ ಅವರು 2011 ರಲ್ಲಿ ತಮ್ಮ ಮೊದಲ ಪತ್ನಿ ರಾಮ್‌ಲತ್ (ಲತಾ) ಅವರಿಂದ ವಿಚ್ಛೇದನ ಪಡೆದಿದ್ದು, ಇವರ ವಿಚ್ಛೇದನವು ಸಾಕಷ್ಟು ಸಾರ್ವಜನಿಕ ಗಮನ ಸೆಳೆದಿತ್ತು. ಇದೀಗ, ವಿಚ್ಛೇದನವಾಗಿ 14 ವರ್ಷಗಳ ನಂತರ ರಾಮ್‌ಲತ್ ಮೊದಲ ಬಾರಿಗೆ ತಮ್ಮ ಮಾಜಿ ಪತಿಯ ಬಗ್ಗೆ ಮಾತನಾಡಿದ್ದಾರೆ.
ತಮಿಳಿನ ಯೂಟ್ಯೂಬ್ ಚಾನೆಲ್ ‘ಅವಳ್ ವಿಕಟನ್’ಗೆ ನೀಡಿದ ಸಂದರ್ಶನದಲ್ಲಿ ರಾಮ್‌ಲತ್, ತಮ್ಮ ಮಗ ರಿಷಿ ರಾಘವೇಂದ್ರ ದೇವ ಅವರ ಚೊಚ್ಚಲ ವೇದಿಕೆ ಪ್ರದರ್ಶನ ಮತ್ತು ಅವರ ತಂದೆ ಪ್ರಭುದೇವ ಅವರೊಂದಿಗಿನ ಬಾಂಧವ್ಯದ ಬಗ್ಗೆ ಮಾತನಾಡಿದರು. ಪ್ರಭುದೇವ, ತಮ್ಮ ಮಕ್ಕಳಿಗೆ ಯಾವಾಗಲೂ ಉತ್ತಮ ತಂದೆಯಾಗಿದ್ದಾರೆ ಮತ್ತು ಈಗಲೂ ತಮ್ಮ ಮಕ್ಕಳಿಗೆ ಇಷ್ಟವಿಲ್ಲದ ಯಾವುದೇ ಕೆಲಸವನ್ನು ಅವರು ಮಾಡುವುದಿಲ್ಲ ಎಂದು ಹೇಳಿದ್ದಾರೆ
“ಅವರ ಮಕ್ಕಳು ಅವರ ಜೀವನ. ಅವರು ಇಬ್ಬರಿಗೂ ಬಹಳ ಅಂಟಿಕೊಂಡಿದ್ದಾರೆ. ಅವರು ತಂದೆ ಮತ್ತು ಮಗನಂತೆ, ಯಾವುದೇ ಪರಿಸ್ಥಿತಿಯಲ್ಲಿಯೂ ಪರಸ್ಪರ ಮಾತನಾಡುತ್ತಾರೆ” ಎಂದು ರಾಮ್‌ಲತ್ ಹಂಚಿಕೊಂಡರು.
ಮುಂದುವರಿದು ಮಾತನಾಡಿದ ಅವರು, ವಿಚ್ಛೇದನದ ನಂತರವೂ ತಮ್ಮ ಮಾಜಿ ಪತಿ ತಮಗೆ ಬೆಂಬಲವಾಗಿ ನಿಂತಿದ್ದಾರೆ, ಅದರಲ್ಲೂ ಮಕ್ಕಳ ವಿಷಯದಲ್ಲಿ ಅವರು ಎಂದಿಗೂ ಹಿಂದೆ ಸರಿದಿಲ್ಲ ಎಂದು ತಿಳಿಸಿದರು. ಮಕ್ಕಳ ವಿಷಯಕ್ಕೆ ಬಂದಾಗ ಪ್ರಭುದೇವ ಅವರಿಗೂ ಅದೇ ಜವಾಬ್ದಾರಿ ಇದೆ ಮತ್ತು ಯಾವುದೇ ನಿರ್ಧಾರವನ್ನು ಪರಸ್ಪರ ಚರ್ಚಿಸಿದೇ ತೆಗೆದುಕೊಳ್ಳುವುದಿಲ್ಲ ಎಂದು ರಾಮ್‌ಲತ್ ಹೇಳಿದರು.
ಕೊನೆಯಲ್ಲಿ, ಪ್ರಭುದೇವ ಅವರೊಂದಿಗಿನ ಈಗಿನ ಸಂಬಂಧದ ಬಗ್ಗೆ ಮಾತನಾಡಿದ ರಮಾಲತ್, ವಿಚ್ಛೇದನದ ನಂತರವೂ ಪ್ರಭುದೇವ ಅವರು ತಮ್ಮ ಬಗ್ಗೆ ಎಂದಿಗೂ ಕೆಟ್ಟದಾಗಿ ಅಥವಾ ತಪ್ಪಾಗಿ ಮಾತನಾಡಿಲ್ಲ ಎಂದು ಹೇಳಿದರು. “ನಾವು ಬೇರೆಯಾದ ನಂತರ ಅವರು ನನ್ನ ಬಗ್ಗೆ ಕೆಟ್ಟದಾಗಿ ಏನಾದರೂ ಹೇಳಿದ್ದರೆ ನನಗೆ ಕೋಪ ಬರುತ್ತಿತ್ತು. ಆದರೆ ಅವರು ನನ್ನ ಬಗ್ಗೆ ಒಂದೇ ಒಂದು ಕೆಟ್ಟ ಶಬ್ದವನ್ನೂ ಆಡಿಲ್ಲ. ಅಂತಹ ವ್ಯಕ್ತಿಯ ಬಗ್ಗೆ ನಾನೂ ಕೆಟ್ಟದಾಗಿ ಮಾತನಾಡುವುದಿಲ್ಲ” ಎಂದು ರಮಾಲತ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಭುದೇವ ಮತ್ತು ರಾಮ್‌ಲತ್ ಸಂಬಂಧ ನಟಿ ನಯನತಾರಾ ಅವರೊಂದಿಗೆ ಪ್ರಭುದೇವ ಲಿವ್-ಇನ್ ಸಂಬಂಧ ಹೊಂದಿದ್ದಾಗ ಮುರಿಯಲು ಪ್ರಾರಂಭಿಸಿತು. ರಾಮ್‌ಲತ್ ನ್ಯಾಯಾಲಯದ ಸಹಾಯವನ್ನು ಕೋರಿದ್ದರು ಮತ್ತು ಅವರೊಂದಿಗೆ ಮತ್ತೆ ಒಂದಾಗುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಒಂದು ವೇಳೆ ತಮ್ಮಿಂದ ದೂರಾದ ಪತಿ ಮತ್ತು ನಟಿ ವಿವಾಹವಾದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ರಾಮ್‌ಲತ್ ಬೆದರಿಕೆ ಹಾಕಿದ್ದರು. ಇದರ ಪರಿಣಾಮವಾಗಿ ಅನೇಕ ಮಹಿಳಾ ಸಂಘಟನೆಗಳು ನಯನತಾರಾ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದ್ದವು ಮತ್ತು ಅವರನ್ನು ಮನೆ ಮುರಿದವಳು ಎಂದು ಟೀಕಿಸಿದ್ದವು. 2011 ರ ವೇಳೆಗೆ ರಾಮ್‌ಲತ್ ಮತ್ತು ಪ್ರಭುದೇವ ವಿಚ್ಛೇದನ ಪಡೆದರೆ, 2012 ರಲ್ಲಿ ನಟಿ ಪ್ರಭುದೇವ ಅವರೊಂದಿಗಿನ ಸಂಬಂಧವನ್ನು ಮುರಿದುಕೊಂಡಿರುವುದನ್ನು ಖಚಿತಪಡಿಸಿದರು.