ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಸರ್ಕಾರದಿಂದ ಮಂಜೂರಾದ ಭೂಮಿಗಳ 1.96 ಲಕ್ಷ ಪೋಡಿ ದುರಸ್ತಿಗೆ ಇಂದಿನಿಂದ ಅಭಿಯಾನ: 25 ಲಕ್ಷ ಕುಟುಂಬಗಳಿಗೆ ಸಮರ್ಪಕ ದಾಖಲೆ

ಬೆಂಗಳೂರು: ಸರ್ಕಾರದಿಂದ ಮಂಜೂರಾದ ಭೂಮಿಗಳ 1.96 ಲಕ್ಷ ಪೋಡಿ ದುರಸ್ತಿ ಕಾರ್ಯ ಇಂದಿನಿಂದ ಆರಂಭವಾಗಲಿದೆ. ರಾಜ್ಯದ 25 ಲಕ್ಷ ರೈತ ಕುಟುಂಬಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಸಚಿವರು ನಂತರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ 1.96 ಲಕ್ಷ ಸರ್ಕಾರಿ ಸರ್ವೆ ಸಂಖ್ಯೆಯಲ್ಲಿ ಭೂರಹಿತರಿಗೆ ಸರ್ಕಾರಿ ಭೂಮಿ ಮಂಜೂರು ಮಾಡಲಾಗಿದೆ. ಕಳೆದ 30 ರಿಂದ 40 ವರ್ಷಗಳ ಹಿಂದೆಯೇ ಭೂಮಿ ಮಂಜೂರು ಮಾಡಲಾಗಿದ್ದರೂ ಪೋಡಿ ದುರಸ್ತಿ ಮಾಡಿಲ್ಲ. ಇದರಿಂದ ಭೂಮಿ ಪಡೆದವರಿಗೆ ಪಹಣಿ ಸೇರಿ ಇತರೆ ವಿಚಾರದಲ್ಲಿ ಸಮಸ್ಯೆಯಾಗುತ್ತಿದೆ. ಹೀಗಾಗಿ ರಾಜ್ಯಾದ್ಯಂತ ಪೋಡಿ ದುರಸ್ತಿ ಕಾರ್ಯ ಆರಂಭಿಸಲಾಗುತ್ತಿದೆ. ಶನಿವಾರ ಹಾಸನದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಪೋಡಿ ದುರಸ್ತಿಯಡಿ ಭೂಮಿಗೆ ಸಂಬಂಧಿಸಿದ ದಾಖಲೆಯ ನಮೂನೆ 1ರಿಂದ 5 ಮತ್ತು 6ರಿಂದ 10ನ್ನು ಸರಿಪಡಿಸಬೇಕಿದ್ದು, ಈಗಾಗಲೇ 1.96 ಲಕ್ಷ ಸರ್ವೇ ಸಂಖ್ಯೆಗಳ ಪೈಕಿ 27,107 ಸರ್ವೆ ಸಂಖ್ಯೆಗಳ ನಮೂನೆ 1ರಿಂದ 5ನ್ನು ಆನ್ಲೈನ್ ಮೂಲಕ ದಾಖಲಿಸುವ ಕಾರ್ಯ ಪೂರ್ಣಗೊಂಡಿದೆ. ಇನ್ನೊಂದು ತಿಂಗಳಲ್ಲಿ ಉಳಿದ ಸರ್ವೆ ಸಂಖ್ಯೆಯ ನಮೂನೆ 1ರಿಂದ 5ನ್ನು ದಾಖಲಿಸುವ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದಾರೆ.

ನಮೂನೆ 6ರಿಂದ 10 ಸರ್ವೇ ಕಾರ್ಯಕ್ಕೆ ಸಂಬಂಧಿಸಿದ್ದಾಗಿದೆ. ನಮೂನೆ 1ರಿಂದ 5ರ ದಾಖಲೆ ಆನ್ಲೈನ್ ನಲ್ಲಿ ದಾಖಲಿಸಿದ ನಂತರ ಸರ್ವೆ ಕಾರ್ಯ ಆರಂಭಿಸಲಾಗುವುದು. ಮುಂದಿನ ಎಂಟರಿಂದ ಹತ್ತು ತಿಂಗಳಲ್ಲಿ ಪೋಡಿ ದುರಸ್ತಿ ಕಾರ್ಯ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಇದರಿಂದ ಸುಮಾರು 25 ಲಕ್ಷ ಕುಟುಂಬಗಳಿಗೆ ಸಮರ್ಪಕ ದಾಖಲೆಗಳು ದೊರೆಯುತ್ತವೆ ಎಂದು ಹೇಳಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read