ರಾಮೇಶ್ವರಂ: ಎಂ.ಕೆ. ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರ ಮತ್ತು ಭಾರತೀಯ ಜನತಾ ಪಕ್ಷ ನೇತೃತ್ವದ ಕೇಂದ್ರ ಸರ್ಕಾರದ ನಡುವಿನ ಭಾಷಾ ವಿವಾದದ ಮಧ್ಯೆ, ಪ್ರಧಾನಿ ಮೋದಿ ಅವರು ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ.
ತಮಿಳುನಾಡು ನಾಯಕರಿಂದ ತಮಗೆ ಹಲವಾರು ಪತ್ರಗಳು ಬರುತ್ತಿವೆ, ಅವುಗಳಲ್ಲಿ ಯಾವುದೂ ತಮಿಳಿನಲ್ಲಿ ಸಹಿ ಮಾಡಿಲ್ಲ ಎಂದು ಹೇಳಿದರು.
ರಾಮೇಶ್ವರಂನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನೀವು ತಮಿಳಿನ ಬಗ್ಗೆ ಹೆಮ್ಮೆ ಪಡುತ್ತಿದ್ದರೆ, ನಾನು ಎಲ್ಲರೂ ಕನಿಷ್ಠ ಪಕ್ಷ ತಮಿಳಿನಲ್ಲಿ ನಿಮ್ಮ ಹೆಸರಿಗಾದರೂ ಸಹಿ ಮಾಡಿ” ಎಂದು ಹೇಳಿದ್ದಾರೆ.
ತಮಿಳುನಾಡು ಮತ್ತು ಕೇಂದ್ರ ಸರ್ಕಾರದ ನಡುವಿನ ಭಾಷಾ ವಿವಾದ ಬಹಳ ದಿನಗಳಿಂದ ನಡೆಯುತ್ತಲೇ ಇದೆ, ಆದಾಗ್ಯೂ, ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) 2020 ರಲ್ಲಿ ಪ್ರಸ್ತಾಪಿಸಲಾದ ತ್ರಿಭಾಷಾ ಸೂತ್ರದಿಂದಾಗಿ ಇದು ಇನ್ನಷ್ಟು ಉಲ್ಬಣಗೊಂಡಿದೆ. ಈ ನೀತಿಯು ರಾಜ್ಯದ ಸ್ವಾಯತ್ತತೆ ಮತ್ತು ಭಾಷಾ ವೈವಿಧ್ಯತೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಪ್ರಾದೇಶಿಕ ಭಾಷೆಗಳಿಗಿಂತ ಹಿಂದಿಗೆ ಆದ್ಯತೆ ನೀಡುತ್ತದೆ ಎಂದು ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
ಹೊಸ ಪಂಬನ್ ಸೇತುವೆ ಉದ್ಘಾಟಿಸಿದ ನಂತರ ರಾಮೇಶ್ವರಂನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ತಮಿಳು ಭಾಷೆ ಮತ್ತು ತಮಿಳು ಪರಂಪರೆ ಪ್ರಪಂಚದ ಪ್ರತಿಯೊಂದು ಮೂಲೆಯನ್ನು ತಲುಪುವಂತೆ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ಕೆಲವೊಮ್ಮೆ, ತಮಿಳುನಾಡಿನ ಕೆಲವು ನಾಯಕರಿಂದ ನನಗೆ ಪತ್ರಗಳು ಬಂದಾಗ ನನಗೆ ಆಶ್ಚರ್ಯವಾಗುತ್ತದೆ; ಅವುಗಳಲ್ಲಿ ಯಾವುದೂ ತಮಿಳು ಭಾಷೆಯಲ್ಲಿ ಸಹಿ ಮಾಡಲಾಗಿಲ್ಲ. ನೀವು ತಮಿಳಿನ ಬಗ್ಗೆ ಹೆಮ್ಮೆ ಪಡುತ್ತಿದ್ದರೆ, ಪ್ರತಿಯೊಬ್ಬರೂ ಕನಿಷ್ಠ ತಮಿಳಿನಲ್ಲಿ ನಿಮ್ಮ ಹೆಸರನ್ನು ಸಹಿ ಮಾಡುವಂತೆ ನಾನು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.
ಬಡ ಕುಟುಂಬಗಳ ಮಕ್ಕಳು ಸಹ ವೈದ್ಯರಾಗುವ ಕನಸನ್ನು ನನಸಾಗಿಸಲು ತಮಿಳು ಭಾಷೆಯಲ್ಲಿ ವೈದ್ಯಕೀಯ ಕೋರ್ಸ್‌ಗಳನ್ನು ಪ್ರಾರಂಭಿಸಬೇಕೆಂದು ನಾನು ತಮಿಳುನಾಡು ಸರ್ಕಾರವನ್ನು ಒತ್ತಾಯಿಸುತ್ತೇನೆ. ನಮ್ಮ ದೇಶದ ಯುವಕರು ವೈದ್ಯರಾಗಲು ವಿದೇಶಗಳಿಗೆ ಹೋಗಬೇಕಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಯತ್ನವಾಗಿದೆ. ಕಳೆದ 10 ವರ್ಷಗಳಲ್ಲಿ, ತಮಿಳುನಾಡಿಗೆ 11 ಹೊಸ ವೈದ್ಯಕೀಯ ಕಾಲೇಜುಗಳು ಬಂದಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.