ಬೆಂಗಳೂರು: ಮಹಿಳೆಯರ ಫೊಟೋಗಳನ್ನು ಕ್ಲಿಕ್ಕಿಸಿ ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದ ಕಿರಾತಕನನ್ನು ಬೆಂಗಳೂರಿನ ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಶಿಶ್ ಮೊನ್ನಪ್ಪ ಬಂಧಿತ ಆರೋಪಿ. ಕೊಡಗು ಜಿಲ್ಲೆಯ ಮಡಿಕೇರಿ ಮೂಲದ ಅಶಿಶ್ ಪತ್ನಿ , ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದ. ಜಕ್ಕೂರಿನ ಬಾಡಿಗೆ ಮನೆಯಲ್ಲಿದ್ದ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಕಳೆದ ಜನವರಿಯಲ್ಲಿ ಕೆಲಸ ಬಿಟ್ಟಿದ್ದ. ಬಳಿಕ ಬೇರೆ ಕಂಪನಿಗೆ ಕೆಲಸಕ್ಕೆ ಸೇರಲು ರೆಸ್ಯೂಮ್ ಕಳುಹಿಸಲೆಂದು ಮಹಿಳಾ ಸಹೋದ್ಯೋಗಿಯೊಬ್ಬರ ಲ್ಯಾಪ ಟಾಪ್ ಪಡೆದಿದ್ದ. ಕೆಲ ದಿನಗಳ ಬಳಿಕ ಲ್ಯಾಪ್ ಟಾಪ್ ನ್ನು ವಾಪಾಸ್ ನೀಡಿದ್ದ. ಆದರೆ ಲ್ಯಾಪ್ ಟಾಪ್ ಕೊಡುವಾಗ ತಾನು ಮಹಿಳೆಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿಟ್ಟಿದ್ದ ಫೋಲ್ಡರ್ ಡಿಲಿಟ್ ಮಾಡುವುದನ್ನು ಮರೆತಿದ್ದ. ಮಹಿಳೆ ತನ್ನ ಲ್ಯಾಪ್ ಟಾಪ್ ಚೆಕ್ ಮಾಡಿದಾಗ ಕಂಪನಿಯ ಮಹಿಳಾ ಸಹೋದ್ಯೋಗಿಗಳ ಫೋಟೋಗಳನ್ನು ಮಾರ್ಫ್ ಮಾಡಿರುವುದು ಕಂಡುಬಂದಿದೆ. ಈ ಬಗ್ಗೆ ಆತನನ್ನು ಕರೆದು ಪ್ರಶ್ನಿಸಿದಾಗ ಆರೋಪಿ ಗಾಬರಿಯಾಗಿ ಸ್ಥಳದಲ್ಲೇ ಮೊಬೈಲ್ ಬಿಟ್ಟು ಪರಾರಿಯಾಗಿದ್ದ.
ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.