ಹಾಸನ: ಕುಡಿದ ಅಮಲಿನಲ್ಲಿ ಪಿಡಿಒಗಳ ನಡುವೆ ಗಲಾಟೆ ನಡೆದಿದ್ದು, ಬಿಯರ್ ಬಾಟಲಿಯಿಂದ ಹೊಡೆದಾಡಿಕೊಂಡಿದ್ದಾರೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಗೋವಿನಕೆರೆ ಗ್ರಾಮ ಪಂಚಾಯಿತಿ ಸದಸ್ಯನ ಮನೆಯಲ್ಲಿ ಪಾರ್ಟಿಯ ವೇಳೆ ಗಲಾಟೆಯಾಗಿದೆ.
ಗೋವಿನಕೆರೆ ಎಂ. ಶಿವರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಸ್ವಾಮಿ, ಹಿರಿಸಾವೆ ಗ್ರಾಮ ಪಂಚಾಯಿತಿ ಅಧಿಕಾರಿ ಸತೀಶ್ ಹೊಡೆದಾಡಿಕೊಂಡಿದ್ದಾರೆ. ಸರ್ಕಾರಿ ನೌಕರರ ಸಂಘದ ಚುನಾವಣೆಯ ವಿಚಾರವಾಗಿ ಮಾತಿನ ಚಕಮಕಿ ನಡೆದಿದ್ದು, ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ಪಿಡಿಒಗಳ ನಡುವೆ ಗಲಾಟೆಯಾಗಿದೆ.
ಸತೀಶ್ ತಲೆಗೆ ಮದ್ಯದ ಬಾಟಲಿಯಿಂದ ರಾಮಸ್ವಾಮಿ ಹಲ್ಲೆ ಮಾಡಿದ್ದಾರೆ. ಬಾಟಲಿಯಿಂದ ಹೊಡೆದಿದ್ದರಿಂದ ಸತೀಶ್ ತಲೆ, ಮುಖಕ್ಕೆ ಗಾಯಗಳಾಗಿದ್ದು ಗಾಯಾಳು ಸತೀಶ್ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.