ಶಿವಮೊಗ್ಗ: ಲಂಚ ಪಡೆಯುತ್ತಿದ್ದ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ ಮೊಹಮ್ಮದ್ ಅಲಿ ಮತ್ತು ಕಾರ್ಯದರ್ಶಿ ಪಿ.ಹೆಚ್. ಸುರೇಶ್ ಗುರುವಾರ ಸಂಜೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಭದ್ರಾವತಿ ತಾಲೂಕು ಕಾಳನಕಟ್ಟೆ ಗ್ರಾಮದ ದಿವಾಕರ್ ಅವರು ತಮ್ಮ ತಂದೆ ರಾಜಪ್ಪ ಹೆಸರಿನಲ್ಲಿರುವ ಖಾಲಿ ಜಾಗಕ್ಕೆ ಚೆಕ್ ಬಂಧಿ ತಿದ್ದುಪಡಿ ಮಾಡಿ ಇ- ಸ್ವತ್ತು ಮಾಡಿಕೊಡುವಂತೆ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ 30 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆ ಇಡಲಾಗಿತ್ತು. ಈ ಕುರಿತು ದಿವಾಕರ್ ಶಿವಮೊಗ್ಗ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಪಂಚಾಯತಿ ಕಚೇರಿ ಎದುರು 15 ಸಾವಿರ ರೂ. ನೀಡುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಹಣ ಸಹಿತ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ಲೋಕಾಯುಕ್ತ ಎಸ್ಪಿ ಎಂ.ಹೆಚ್. ಮಂಜುನಾಥ ಚೌಧರಿ ಮಾರ್ಗದರ್ಶನದಲ್ಲಿ ಉಪಾಧೀಕ್ಷಕ ಬಿ.ಪಿ. ಚಂದ್ರಶೇಖರ್ ಕಾರ್ಯಾಚರಣೆ ನಡೆಸಿದ್ದಾರೆ. ಪಿಐ ವೀರಬಸಪ್ಪ ಎಲ್. ಕುಸಲಾಪುರ, ಸಿಬ್ಬಂದಿಗಳಾದ ಯೋಗೇಶ್, ಟೀಕಪ್ಪ, ಸುರೇಂದ್ರ, ಬಿ.ಟಿ. ಚನ್ನೇಶ್, ದೇವರಾಜ್, ಪ್ರಕಾಶ್ ಬಾರಿಮರದ, ಅಂಜಲಿ, ಚಂದ್ರಿಬಾಯಿ, ಗೋಪಿ, ಪ್ರದೀಪ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.