ಶಿಸ್ತು ರೂಢಿಸಿಕೊಳ್ಳಬೇಕಾದರೆ ಕ್ರೀಡೆಯಲ್ಲಿ ಭಾಗವಹಿಸುವುದು ಅಗತ್ಯ: ವರ್ತಿಕಾ ಕಟಿಯಾರ್

ಬಳ್ಳಾರಿ: ಪೊಲೀಸ್ ಇಲಾಖೆ ಎಂದರೆ ಶಿಸ್ತಿಗೆ ಹೆಸರುವಾಸಿ. ಇಂತಹ ಶಿಸ್ತು ರೂಢಿಸಿಕೊಳ್ಳಬೇಕಾದರೆ ಕ್ರೀಡೆಯಲ್ಲಿ ಭಾಗವಹಿಸುವುದು ಅಗತ್ಯ. ಕ್ರೀಡೆಗಳಿಂದ ಶಿಸ್ತು, ಸಂಯಮ ರೂಢಿಯಾಗಲಿದೆ. ಜೊತೆಗೆ ಗುಂಪು ಕ್ರೀಡೆಗಳಿಂದ ನಾಯಕತ್ವದ ಮಹತ್ವವೂ ಅರಿವಿಗೆ ಬರಲಿದೆ. ಎಲ್ಲರೂ ಒಟ್ಟುಗೂಡಿದರೆ ಜಯ ಎನ್ನುವುದು ಗೊತ್ತಾಗಲಿದೆ. ಜೀವನದಲ್ಲೂ, ಕರ್ತವ್ಯ ನಿರ್ವಹಣೆಯಲ್ಲಿ ಒಗ್ಗಟ್ಟು ಎಷ್ಟು ಮುಖ್ಯ ಎನ್ನುವುದನ್ನು ಕ್ರೀಡೆಗಳು ತಿಳಿಸಿಕೊಡುತ್ತವೆ ಎಂದು ಬಳ್ಳಾರಿ ವಲಯ ಪೊಲೀಸ್ ಮಹಾನೀರಿಕ್ಷಕರಾದ ಕ್ರೀಡೆ, ವರ್ತಿಕಾ ಕಟಿಯಾರ್ ಅವರು ಹೇಳಿದರು.

ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಳ್ಳಾರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ2025ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಬಾರಿಯ ವಾರ್ಷಿಕ ಕ್ರೀಡಾಕೂಟವನ್ನು ಬಹಳ ಶಿಸ್ತು ಬದ್ಧತೆಯಿಂದ ನಡೆಸಿದ್ದೀರಿ. ಎಲ್ಲರು ಒಟ್ಟುಗೂಡಿ ಕ್ರೀಡೆಯಲ್ಲಿ ಭಾಗವಹಿಸಿ, ತಮ್ಮ ಪ್ರತಿಭೆ ಜತೆಗೆ ಎಲ್ಲರೊಟ್ಟಿಗೆ ಒಡಗೂಡಿ ಬೆರೆತ್ತಿದ್ದೀರಿ. ಗೆದ್ದವರಿಗೆಲ್ಲ ಅಭಿನಂದನೆ. ಸೋತವರು ನಿರಾಶರಾಗಬಾರದು. ಸೋಲು ಗೆಲುವಿನ ಮೆಟ್ಟಿಲು ಎನ್ನುವುದನ್ನು ಅರಿಯಬೇಕು. ಜೀವನವನ್ನು ಕ್ರೀಡೆಯಂತೆ ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳಬೇಕು. ಶಿಸ್ತು, ಸಂಯಮ, ಮೌಲ್ಯಯುತ ಜೀವನ ಅತ್ಯಂತ ಮುಖ್ಯ ಎಂದು ಹೇಳಿದರು.

ಟೈಮ್ ಮ್ಯಾನೇಜ್ಮೆಂಟ್ ಪೊಲೀಸ್ ವೃತ್ತಿ ಜೀವನದಲ್ಲಿ ತುಂಬಾ ಮಹತ್ವದ್ದು. ಜಿಲ್ಲೆಯಲ್ಲಿ ನಡೆದ ಹಬ್ಬ-ಹರಿ ದಿನಗಳಲ್ಲಿ ರಜೆ ತೆಗೆದುಕೊಳ್ಳದೇ ಎಲ್ಲ ಹಂತದ ಪೊಲೀಸ್ ಅಧಿಕಾರಿಗಳು ನಿಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದೀರಿ ಎಂದು ಶ್ಲಾಘಿಸಿದರು.

ಮೂರು  ದಿನಗಳಲ್ಲಿ ಶಿಸ್ತು ಮತ್ತು ಸಮಯ ಬದ್ಧವಾದ ಕ್ರೀಡಾಕೂಟ ನಡೆಸಿದ್ದೀರಿ, ಮುಂದೆ ಕೂಡ ಇದೇ ರೀತಿ ಪ್ರತಿ ದಿನ ಪೊಲೀಸ್ ಕೆಲಸದಲ್ಲಿ ಮತ್ತು ಜೀವನದಲ್ಲಿ ಶಿಸ್ತು ಮತ್ತು ಸಮಯ ಬದ್ಧತೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಬಳ್ಳಾರಿ ಜಿಲ್ಲೆಯಲ್ಲಿ ಎಲ್ಲ ಠಾಣೆಯ ಸಿಬ್ಬಂದಿಗಳು ಉತ್ತಮ ಕೆಲಸ ಮಾಡುತ್ತಿದ್ದೀರಿ, ಇದನ್ನೇ ಮುಂದುವರಿಸಿಕೊಂಡು ಹೋಗಬೇಕು. ಕಾನೂನು ಸುವ್ಯವಸ್ಥೆ, ಟ್ರಾಫಿಕ್ ಹಾಗೂ ಅಪರಾಧ ಪ್ರಕರಣ ಪತ್ತೆಗಳಲ್ಲಿ ಚುರುಕಾಗಿ ಕೆಲಸ ಮಾಡಬೇಕು. ಸ್ವತ್ತು ವಿಲೇವಾರಿ ವಿಚಾರವಾಗಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಉತ್ತಮವಾಗಿ ಕ್ರಮ ವಹಿಸಿ, ಅಚ್ಚುಕಟ್ಟಾಗಿ ವಿಲೇವಾರಿ ಮಾಡಿದ್ದಾರೆ. ಮುಂದೆಯೂ ಹೀಗೆ ಮಾಡಿ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಹೇಳೀದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ. ಅವರು ಮಾತನಾಡಿ, ಈ ಮೂರು ದಿನಗಳಲ್ಲಿ ನಡೆದ ಕ್ರೀಡಾಕೂಟದಲ್ಲಿ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಹಳ ಉತ್ಸಾಹದಿಂದ ಭಾಗವಹಿಸಿದ್ದೀರಿ. ಹೀಗೆ ಮುಂದಿನ ದಿನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಎಂದು  ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ 6 ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು. ಪೊಲೀಸ್ ಸಿಬ್ಬಂದಿಗಳು ಪೊಲೀಸ್ ಧ್ವಜ ಹಸ್ತಾಂತಿಸಿದರು. ಬಳಿಕ ವಿಜೇತರಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read