ಬಹುನಿರೀಕ್ಷಿತ ‘ಹೇರಾ ಫೇರಿ 3’ ಚಿತ್ರದಿಂದ ಹಿರಿಯ ನಟ ಪರೇಶ್ ರಾವಲ್ ಅನಿರೀಕ್ಷಿತವಾಗಿ ಹೊರನಡೆದಿರುವುದು ಚಿತ್ರರಂಗಕ್ಕೆ ಆಘಾತ ತಂದಿದೆ. ತಮ್ಮ ನಿರ್ಧಾರದಿಂದ ಅಕ್ಷಯ್ ಕುಮಾರ್ ಕಣ್ಣೀರಿಟ್ಟಿದ್ದಾರೆ ಎಂದು ನಿರ್ದೇಶಕ ಪ್ರಿಯದರ್ಶನ್ ಬಹಿರಂಗಪಡಿಸಿದ್ದಾರೆ. ಫ್ರಾಂಚೈಸಿ ಹಕ್ಕುಗಳನ್ನು ಖರೀದಿಸಿರುವ ಅಕ್ಷಯ್ ಕುಮಾರ್, ಪರೇಶ್ ರಾವಲ್ ವಿರುದ್ಧ ₹25 ಕೋಟಿ ಪರಿಹಾರಕ್ಕೆ ದಾವೆ ಹೂಡಿದ್ದಾರೆ ಎಂಬ ವರದಿಗಳೂ ಕೇಳಿಬಂದಿವೆ.
ಮಿಡ್-ಡೇಗೆ ನೀಡಿರುವ ಸಂದರ್ಶನದಲ್ಲಿ ಪ್ರಿಯದರ್ಶನ್, ಪರೇಶ್ ರಾವಲ್ ಅವರ ನಿರ್ಗಮನದ ಕುರಿತು ಮಾತನಾಡಿ, “ನಮ್ಮೆಲ್ಲರ ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು. ಹತ್ತು ದಿನಗಳ ಹಿಂದಷ್ಟೇ ಸುನೀಲ್, ಅಕ್ಷಯ್ ಮತ್ತು ಪರೇಶ್ ಒಂದು ದೃಶ್ಯ ಹಾಗೂ ಐಪಿಎಲ್ ಟೀಸರ್ ಶೂಟ್ ಮಾಡಿದ್ದರು. ‘ಹೇರಾ ಫೇರಿ 3’ ಮಾಡಲು ನಾವು ಸರ್ವಾನುಮತದಿಂದ ಒಪ್ಪಿದ ನಂತರವೇ ಅಕ್ಷಯ್ ಫ್ರಾಂಚೈಸಿ ಹಕ್ಕುಗಳನ್ನು ಖರೀದಿಸಿದ್ದರು” ಎಂದು ತಿಳಿಸಿದ್ದಾರೆ.
“ಪರೇಶ್ ನನಗೆ ಹೀಗೆ ಯಾಕೆ ಮಾಡುತ್ತಿದ್ದಾರೆ ಎಂದು ಅಕ್ಷಯ್ ಕಣ್ಣೀರಿಡುತ್ತಾ ಕೇಳಿದರು” ಎಂದು ಪ್ರಿಯದರ್ಶನ್ ನೆನಪಿಸಿಕೊಂಡರು. “ಪರೇಶ್ ಏಕಾಏಕಿ ಹೊರನಡೆದ ಕಾರಣ ಅಕ್ಷಯ್ ಆರ್ಥಿಕ ನಷ್ಟ ಅನುಭವಿಸಬಾರದು. ಅವರು ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ನನಗೆ ತಿಳಿದಿದೆ” ಎಂದು ಪ್ರಿಯದರ್ಶನ್ ಸೇರಿಸಿದರು.
ಪ್ರಿಯದರ್ಶನ್‌ಗೆ ಆಘಾತ: ಅಕ್ಷಯ್ ಮತ್ತು ಪರೇಶ್ ಜೊತೆ ‘ಭೂತ್ ಬಂಗ್ಲಾ’ ಚಿತ್ರದ ಚಿತ್ರೀಕರಣವನ್ನು ಮುಗಿಸಿರುವ ನಿರ್ದೇಶಕ ಪ್ರಿಯದರ್ಶನ್, ಪರೇಶ್ ರಾವಲ್ ತಮ್ಮ ನಿರ್ಗಮನದ ಬಗ್ಗೆ ತಿಳಿಸದಿರುವುದು ಆಘಾತಕಾರಿಯಾಗಿದೆ ಎಂದಿದ್ದಾರೆ. “ನಾವು ಹಲವು ವರ್ಷಗಳ ಸ್ನೇಹಿತರಾಗಿದ್ದರೂ, ಮಾಧ್ಯಮಗಳಿಗೆ ಹೇಳುವ ಮುನ್ನ ಒಂದು ಫೋನ್ ಮಾಡಿ ನನಗೆ ತಿಳಿಸಬಹುದಿತ್ತು” ಎಂದು ಪ್ರಿಯದರ್ಶನ್ ಹೇಳಿದರು.
ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡದಿರುವುದು ಪರೇಶ್ ರಾವಲ್ ನಿರ್ಗಮನಕ್ಕೆ ಕಾರಣವಿರಬಹುದು ಎಂಬ ಊಹಾಪೋಹಗಳಿದ್ದವು. ಆದರೆ, ಸೃಜನಾತ್ಮಕ ಭಿನ್ನಾಭಿಪ್ರಾಯಗಳನ್ನು ಪರೇಶ್ ನಿರಾಕರಿಸಿದ್ದಾರೆ. ಈ ಕುರಿತು ಪ್ರಿಯದರ್ಶನ್, “ನನ್ನೊಂದಿಗೆ ಕೆಲಸ ಮಾಡುವಾಗ ಅಕ್ಷಯ್ ಎಂದಿಗೂ ಯಾರ ಪಾತ್ರವನ್ನೂ ಕಡಿಮೆ ಮಾಡಿಲ್ಲ. ನಿರ್ದೇಶಕರ ದೃಷ್ಟಿಯಲ್ಲಿ ಅವರು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಸದ್ಯಕ್ಕೆ, ‘ಹೇರಾ ಫೇರಿ 3’ ಚಿತ್ರದ ಭವಿಷ್ಯ ಅನಿಶ್ಚಿತವಾಗಿದೆ. ಅಂದಹಾಗೆ, ಅಕ್ಷಯ್ ಕುಮಾರ್, ಪ್ರಿಯದರ್ಶನ್ ಮತ್ತು ಪರೇಶ್ ರಾವಲ್ ಅವರು ಇತ್ತೀಚೆಗೆ ‘ಭೂತ್ ಬಂಗ್ಲಾ’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದು, ಈ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ.