ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರ್ಚ್ 22 ರಂದು ಕಾಡಿನಲ್ಲಿ ಪತ್ತೆಯಾಗಿದ್ದ ಶಿಶುವಿನ ತಂದೆ, ತಾಯಿ ಮದುವೆಯಾಗಿದ್ದಾರೆ.
ಬೆಳಾಲು ಗ್ರಾಮದ ಕೋಡೋಳುಕೆರೆ ಸಮೀಪ ಕಾಡಿನಲ್ಲಿ ಶಿಶು ಪತ್ತೆಯಾಗಿತ್ತು. ಅದು ಬೆಳಗಲು ಗ್ರಾಮದ ಮಾಯಾ ಪ್ರದೇಶದ ರಂಜಿತ್ ಗೌಡ(27) ಮತ್ತು ಧರ್ಮಸ್ಥಳ ಸಮೀಪದ ಪಾಂಗಾಳ ನಿವಾಸಿ ಸುಶ್ಮಿತಾ ಅವರ ಶಿಶು ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದರು.
ಎರಡು ಕುಟುಂಬದವರ ಸಮ್ಮುಖದಲ್ಲಿ ನಡ ಗ್ರಾಮದ ಕೊತ್ರೊಟ್ಟು ಸತ್ಯನಾರಾಯಣ ದೇವಾಲಯದಲ್ಲಿ ಮದುವೆ ನೆರವೇರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯವರು ಮಗುವನ್ನು ಪುತ್ತೂರಿನ ವಾತ್ಸಲ್ಯಧಾಮ ದತ್ತು ಕೇಂದ್ರದ ಸುಪರ್ದಿಗೆ ವಹಿಸಿದ್ದಾರೆ. ಕಾನೂನಾತ್ಮಕವಾಗಿ ಶಿಶುವನ್ನು ವಾಪಸ್ ಪಡೆಯುವುದಾಗಿ ದಂಪತಿ ಹೇಳಿದ್ದಾರೆ.
ಮಂಗಳೂರಿನ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ಸುಶ್ಮಿತಾಳನ್ನು ಪ್ರೀತಿಸುತ್ತಿದ್ದ ರಂಜಿತ್ ಮದುವೆಯಾಗುವ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿದ್ದ. ಇತ್ತೀಚೆಗೆ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಶಿಶುವನ್ನು ರಂಜಿತ್ ಗೌಡನ ಮನೆಯಲ್ಲಿ ಸುಶ್ಮಿತಾ ಬಿಟ್ಟು ಹೋಗಿದ್ದಳು. ಆತ ಅದನ್ನು ಕಾಡಿನಲ್ಲಿ ಇಟ್ಟು ಬಂದಿದ್ದ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರಂಜಿತ್ ಗೌಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸುಶ್ಮಿತಾ ಅವರನ್ನು ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದ. ಅಂತೆಯೇ ಮದುವೆಯಾಗಿದ್ದು, ಶಿಶುವನ್ನು ವಾಪಸ್ ಪಡೆಯುವುದಾಗಿ ತಿಳಿಸಿದ್ದಾರೆ.