ಕೊಪ್ಪಳ: ಗಂಗಾವತಿಯ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಗದ್ವಾಲ್ ಕ್ಯಾಂಪ್ ಚರ್ಚ್ ನಲ್ಲಿ ಅಪ್ರಾಪ್ತ ಬಾಲಕಿಯ ವಿವಾಹ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ದಂಡ ಸಹಿತ ಸೆರೆಮನೆ ವಾಸದ ಶಿಕ್ಷೆ ವಿಧಿಸಿ ಗಂಗಾವತಿ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ನಾಗೇಶ ಪಾಟೀಲ ಅವರು ತೀರ್ಪು ಪ್ರಕಟಿಸಿದ್ದಾರೆ.
14 ವರ್ಷದ ಅಪ್ರಾಪ್ತ ಬಾಲಕಿಯ ಪೋಷಕರಾದ ಆರೋಪಿ ನಂ.4 ಮತ್ತು 5 ಅವರು ತಮ್ಮ ಮಗಳ ಮದುವೆಯನ್ನು ಆರೋಪಿ ನಂ.2 ರಿಂದ 5ನೇಯವರು ಕೂಡಿಕೊಂಡು ಆರೋಪಿ ನಂ.1 ನವರೊಂದಿಗೆ ಗದ್ವಾಲ್ ಕ್ಯಾಂಪ್ ಗ್ರಾಮದ ಚರ್ಚ್ ನಲ್ಲಿ ದಿನಾಂಕ: 22-05-2020 ರಂದು ಬೆಳಿಗ್ಗೆ 11.30 ಗಂಟೆಗೆ ಚರ್ಚ್ ಫಾದರ್ ಆರೋಪಿ ನಂ.6 ನೇಯವರ ನೇತೃತ್ವದಲ್ಲಿ ಮಾಡಿದ್ದರು. ಆರೋಪಿತರೆಲ್ಲರೂ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ರ ಕಲಂ 9, 10, 11 ರ ಅಡಿ ಅಪರಾಧ ಮಾಡಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಆಗಿನ ತನಿಖಾಧಿಕಾರಿಯಾಘಿದ್ದ ಪಿಎಸ್ಐ ದೊಡ್ಡಪ್ಪ ಜೆ. ಅವರು ಅಪರಾಧಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಪ್ರಕರಣದ ಆರೋಪಿ ನಂ.1 ಗದ್ವಾಲ್ ಕ್ಯಾಂಪ್ ನಿವಾಸಿ ಕುರಪಣ್ಣ, ಆರೋಪಿ ನಂ.2 ಆನಂದ, ಆರೋಪಿ ನಂ.3 ಆಶಿರ್ವಾದಮ್ಮ, ಶ್ರೀರಾಮನಗರ ನಿವಾಸಿಗಳಾದ ಆರೋಪಿ ನಂ.4 ಯೇಸು, ಆರೋಪಿ ನಂ.5 ಶಾಂತಮ್ಮ, ಗದ್ವಾಲ್ ಕ್ಯಾಂಪ್ ನಿವಾಸಿ ಆರೋಪಿ ನಂ.6 ಅಬ್ರಾಹಂ ಡಿ. ದಾದೆಪಾಲ ಇವರ ವಿರುದ್ಧ ಸಾಕ್ಷ್ಯಾಧಾರಗಳು ಸಾಬೀತಾದ ಕಾರಣ ದೋಷಿಗಳೆಂದು ನಿರ್ಣಯಿಸಿ ಅಕ್ಟೋಬರ್ 14 ರಂದು ತೀರ್ಪು ನೀಡಿದ್ದಾರೆ.
ಆರೋಪಿತರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 9 ಅಪರಾಧಕ್ಕೆ 2 ವರ್ಷಗಳ ಕಾಲ ಸೆರೆಮನೆ ವಾಸ ಮತ್ತು ತಲಾ ರೂ.10 ಸಾವಿರಗಳ ಜುಲ್ಮಾನೆ, ಕಲಂ 10 ರ ಅಪರಾಧಕ್ಕೆ 2 ವರ್ಷಗಳ ಸೆರೆಮನೆ ವಾಸ ಮತ್ತು ತಲಾ ರೂ.10 ಸಾವಿರಗಳ ಜುಲ್ಮಾನೆ ಹಾಗೂ ಕಲಂ 11 ರ ಅಪರಾಧಕ್ಕೆ 2 ವರ್ಷಗಳ ಸೆರೆಮನೆ ವಾಸ ಮತ್ತು ತಲಾ ರೂ.10 ಸಾವಿರಗಳ ದಂಡವನ್ನು ವಿಧಿಸಿ ಆದೇಶಿಸಿದ್ದಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ನಿರಂಜನಸ್ವಾಮಿ ಡಾ.ದೇವಯ್ಯ ಸ್ವಾಮಿ ಹಿರೇಮಠ ಅವರು ವಾದ ಮಂಡಿಸಿದ್ದರು. ಗಂಗಾವತಿ ಗ್ರಾಮೀಣ ಠಾಣೆ ಸಿಬ್ಬಂದಿ ಹೆಚ್ಸಿ 144 ಆಂಜನೇಯ, ಪಿಸಿ 355 ವೆಂಕಟೇಶ, ಪಿಸಿ 164 ಶ್ರೀಶೈಲ ಅವರು ಸಮಯಕ್ಕೆ ಸರಿಯಾಗಿ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಸಹಕರಿಸಿದ್ದಾರೆ ಎಂದು ಗಂಗಾವತಿಯ ಸಹಾಯಕ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.