ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.
ಸೂರ್ಯ ಪ್ರಕಾಶ್ (24) ಎಂಬ ವಿಚರಣಾಧೀನ ಕೈದಿ ಆನಂದ್ ಹಾಗೂ ಹುಸೇನ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದು, ಮೂವರ ಮಧ್ಯೆ ಹೊಡೆದಾಟ ನಡೆದಿದೆ. ಇಬ್ಬರು ಕೈದಿಗಳು ಗಾಯಗೊಂಡಿದ್ದು, ಓರ್ವನಿಗೆ ಗಂಭೀರ ಗಾಯಗಳಾಗಿವೆ.
ಮಧ್ಯಾಹ್ನ ಊಟದ ವೇಳೆ ಸೂರ್ಯ ಪ್ರಕಾಶ್ ಹಾಗೂ ಆನಂದ್ ನಡುವೆ ಸಣ್ಣ ವಿಚಾರವಾಗಿ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಸೂರ್ಯಪ್ರಕಾಶ್ ಬಾತ್ ರೂಮ್ ನಲ್ಲಿ ಅಳವಡಿಸಿದ್ದ ಟೈಲ್ಸ್ ತೆಗೆದುಕೊಂಡು ಆನಂದ್ ಮೇಲೆ ಹಲ್ಲೆ ನಡೆಸಿದ್ದಾನೆ. ಇದನ್ನು ತಪ್ಪಿಸಲು ಬಂದ ಮತ್ತೋರ್ವ ಕೈದಿ ಹುಸೇನ್ ಎಂಬಾತನ ಮೇಲೂ ಹಲ್ಲೆ ನಡೆಸಿದ್ದಾನೆ. ಆನಂದ್ ಗೆ ಗಂಭೀರವಾದ ಗಾಯಗಳಾಗಿವೆ.
ಆನಂದ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಸೇನ್ ಗೆ ಜೈಲಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.