ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ, ಸಿಎಂ ಸ್ಥಾನಕ್ಕಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಪೈಪೋಟಿ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಕೆ.ಹೆಚ್.ಮುನಿಯಪ್ಪ ಸಿಎಂ ಆದರೆ ಸ್ವಾಗತ, ಸಂತೋಷ ಪಡುತ್ತೇನೆ ಎಂದು ಹೇಳಿಕೆ ನೀಡಿರುವ ಬೆನ್ನಲ್ಲೇ ಇದೀಗ ಡಿ.ಕೆ.ಶಿವಕುಮಾರ್ ಕೂಡ ಸಮರ್ಥ ನಾಯಕ ಎಂದು ಶ್ಲಾಘಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ಭೇಟಿ ನೀಡಲಿರುವ ವಿಚಾರವಾಗಿ, ಕಾಂಗ್ರೆಸ್ ನಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವುದು ಕೂಡ ಹೈಕಮಾಂಡ್. ಯಾರೋ ಇಲ್ಲಿ ಕರ್ನಾಟಕದಲ್ಲಿ ಕುಳಿತು ನಾಲ್ಕು ಜನ ಹೇಳಿದ ಮಾತ್ರಕ್ಕೆ ನಾಯಕತ್ವ ಬದಲಾವಣೆ ಆಗುವುದಿಲ್ಲ. ಈಗ ಬಿಹಾರ ಚುನಾವಣೆ ನಡೆಯುತ್ತಿದೆ. ಅಂತಹ ಅವಶ್ಯಕತೆ ಇದ್ದರೆ ಹೈಕಮಾಂಡ್ ನವರೇ ತೀರ್ಮಾನ ಮಾಡುತ್ತಾರೆ ಎಂದರು.
ಇನ್ನು ಡಿ.ಕೆ.ಶಿವಕುಮಾರ್ ಬಗ್ಗೆ ಹೇಳಲು ನನಗೆ ಸಾಮರ್ಥ್ಯವಿಲ್ಲ. ಅವರು ನಮ್ಮ ನಾಯಕರು. ನಮ್ಮ ಅಧ್ಯಕ್ಷರು ಹಾಗೂ ಸಮರ್ಥರಿದ್ದಾರೆ. ಡಿ.ಕೆ.ಶಿವಕುಮಾರ್ ಸಾಮರ್ಥ್ಯಕ್ಕೆ ಹೋಲಿಕೆ ಮಾಡಲು ಈಗ ಯಾರಿದ್ದಾರೆ. ಅಷ್ಟು ಸಾಮರ್ಥ್ಯ ಅವರಿಗಿದೆ. ಅದರ ಬಗ್ಗೆ ನಾವು ಈಗ ಹೇಳುವಂತದ್ದಲ್ಲ. ಹೈಕಮಾಂಡ್ ನಿಂದ ತೀರ್ಮಾನವಾದಾಗ ಹಾಗೂ ಹೈಕಮಾಂಡ್ ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ ಎಂದರು.
