ಪಾನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಮಹತ್ವದ ಸೂಚನೆಯನ್ನು ನೀಡಿದೆ. ಒಂದು ವೇಳೆ ನೀವು ಆಧಾರ್ ಎನ್‌ರೋಲ್‌ಮೆಂಟ್ ಐಡಿ ಬಳಸಿ ಪಾನ್ ಕಾರ್ಡ್ ಪಡೆದಿದ್ದರೆ, 2025ರ ಡಿಸೆಂಬರ್ 31ರೊಳಗೆ ನಿಮ್ಮ ಅಸಲಿ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಅಪ್‌ಡೇಟ್ ಮಾಡಿಕೊಳ್ಳಬೇಕೆಂದು ಸಿಬಿಡಿಟಿ ಕಟ್ಟುನಿಟ್ಟಾಗಿ ತಿಳಿಸಿದೆ.
ಅಕ್ಟೋಬರ್ 1, 2024ರ ಮೊದಲು ಆಧಾರ್ ಎನ್‌ರೋಲ್‌ಮೆಂಟ್ ಐಡಿ ಮೂಲಕ ಪ್ಯಾನ್ ಕಾರ್ಡ್ ಪಡೆದ ಪ್ರತಿಯೊಬ್ಬರೂ ಈ ನಿಯಮವನ್ನು ಪಾಲಿಸುವುದು ಅನಿವಾರ್ಯ. ನಿಮ್ಮ ಆಧಾರ್ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್, ಸಂಬಂಧಪಟ್ಟ ಅಧಿಕಾರಿಗಳು ಅಥವಾ ನೇರವಾಗಿ ಸಿಬಿಡಿಟಿಗೆ ಸಲ್ಲಿಸಬಹುದು.
ಒಂದು ವೇಳೆ ನೀವು ನಿಗದಿತ ಗಡುವಿನೊಳಗೆ ನಿಮ್ಮ ಆಧಾರ್ ಸಂಖ್ಯೆಯನ್ನು ಅಪ್‌ಡೇಟ್ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ಕಾನೂನುಬಾಹಿರವಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ನೀವು ಸಲ್ಲಿಸುವ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಕೂಡಾ ತಿರಸ್ಕೃತವಾಗಬಹುದು ಎಂದು ಸಿಬಿಡಿಟಿ ಎಚ್ಚರಿಸಿದೆ.
ಆದರೆ, ಈ ಅಪ್‌ಡೇಟ್ ಪ್ರಕ್ರಿಯೆಗೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂಬುದು ಸಮಾಧಾನಕರ ಸಂಗತಿ. ಈ ಹಿಂದೆ ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಕೊನೆಯ ದಿನಾಂಕವನ್ನು ಮೀರಿರುವವರಿಗೆ ₹1,000 ದಂಡ ವಿಧಿಸಲಾಗುತ್ತಿತ್ತು. ಆದರೆ, ಆಧಾರ್ ಎನ್‌ರೋಲ್‌ಮೆಂಟ್ ಐಡಿ ಮೂಲಕ ಪ್ಯಾನ್ ಪಡೆದವರಿಗೆ ಈ ಅವಕಾಶ ಉಚಿತವಾಗಿ ಲಭ್ಯವಿದೆ.
ಸಮಯಕ್ಕೆ ಅಪ್‌ಡೇಟ್ ಮಾಡದಿದ್ದರೆ ಆಗುವ ತೊಂದರೆಗಳು
- ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳಬಹುದು.
- ನೀವು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲು ಸಾಧ್ಯವಾಗುವುದಿಲ್ಲ.
- ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಹಾರಗಳಲ್ಲಿ ಅಡೆತಡೆಗಳು ಉಂಟಾಗಬಹುದು.
- ಆಸ್ತಿ ಖರೀದಿ, ಮಾರಾಟ ಮತ್ತು ಹೂಡಿಕೆಗಳಂತಹ ಪ್ರಮುಖ ಕಾರ್ಯಗಳು ಸ್ಥಗಿತಗೊಳ್ಳಬಹುದು.
ಆಧಾರ್ ಸಂಖ್ಯೆಯನ್ನು ಅಪ್‌ಡೇಟ್ ಮಾಡುವುದು ಹೇಗೆ ?
- ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ನಿಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆಗಳನ್ನು ನಮೂದಿಸಿ.
- ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಿ.
- ನಿಮ್ಮ ಆಧಾರ್ ಸಂಖ್ಯೆಯು ಯಶಸ್ವಿಯಾಗಿ ಲಿಂಕ್ ಆಗುತ್ತದೆ.
ನೀವು ಸಹ ಆಧಾರ್ ಎನ್‌ರೋಲ್‌ಮೆಂಟ್ ಐಡಿ ಬಳಸಿ ಪ್ಯಾನ್ ಕಾರ್ಡ್ ಪಡೆದಿದ್ದರೆ, ಯಾವುದೇ ಕಾರಣಕ್ಕೂ 2025ರ ಡಿಸೆಂಬರ್ 31ರ ಗಡುವನ್ನು ಮರೆಯಬೇಡಿ. ಕೂಡಲೇ ನಿಮ್ಮ ಆಧಾರ್ ಸಂಖ್ಯೆಯನ್ನು ಅಪ್‌ಡೇಟ್ ಮಾಡಿಕೊಳ್ಳಿ ಮತ್ತು ನಿಮ್ಮ ಪ್ಯಾನ್ ಕಾರ್ಡ್ ಅನ್ನು ಸಕ್ರಿಯವಾಗಿರಿಸಿಕೊಳ್ಳಿ.