ಕೆನಡಾದಲ್ಲಿ, ಪಾಕಿಸ್ತಾನಿ ವ್ಯಕ್ತಿಯೊಬ್ಬರು ಭಾರತೀಯ ವಿದ್ಯಾರ್ಥಿಯ ಕನಸು ನನಸಾಗಲು ನೆರವಾಗಿದ್ದಾರೆ. ಆ ವ್ಯಕ್ತಿ ಭಾರತೀಯ ವಿದ್ಯಾರ್ಥಿಗೆ 100 ಕೆನೆಡಿಯನ್ ಡಾಲರ್ (ಸುಮಾರು 6,000 ರೂಪಾಯಿ) ಟಿಪ್ ನೀಡುವ ಮೂಲಕ ಸಹಾಯ ಮಾಡಿದ್ದಾರೆ. ಹಮ್ಜಾ ಅಜೀಜ್ ಎಂಬ ಪಾಕಿಸ್ತಾನಿ ವ್ಯಕ್ತಿ ಭಾರತೀಯ ವಿದ್ಯಾರ್ಥಿ ನವನೀತ್‌ನ ಕನಸು ನನಸಾಗಲು ಸಹಾಯ ಮಾಡಿದ್ದಾರೆ. ನವನೀತ್ ಊಬರ್ ಡೆಲಿವರಿ ಡ್ರೈವರ್ ಆಗಿ ಕೆಲಸ ಮಾಡುತ್ತಿರುವಾಗ ಹಮ್ಜಾ ಅಜೀಜ್ ಗೆ ಡೆಲಿವರಿ ನೀಡಲು ಬಂದಿದ್ದರು. ಈ ವೇಳೆ ಹಮ್ಜಾ ಅಜೀಜ್ ನವನೀತ್ ಗೆ 100 ಕೆನೆಡಿಯನ್ ಡಾಲರ್ ಟಿಪ್ ನೀಡಿದ್ದಾರೆ.
ನವನೀತ್ ತನ್ನ ಕುಟುಂಬದಿಂದ ದೂರವಿದ್ದು, ಸ್ವಂತ ಬಾರ್ಬರ್‌ಶಾಪ್ ತೆರೆಯಲು ಬಯಸುತ್ತಿದ್ದಾರೆ. ನವನೀತ್ ಕನಸು ನನಸಾಗಲು ಹಮ್ಜಾ ಅಜೀಜ್ ನೆರವಾಗಿದ್ದಾರೆ. ಹಮ್ಜಾ ಅಜೀಜ್ ಅವರು ನವನೀತ್ ಗೆ ಟಿಪ್ ನೀಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊವನ್ನು ನೋಡಿದ ಉದ್ಯಮಿಯೊಬ್ಬರು ನವನೀತ್‌ನ ಕ್ಷೌರಿಕ ಶಿಕ್ಷಣಕ್ಕೆ ಪ್ರಾಯೋಜಕತ್ವ ನೀಡಿದ್ದಾರೆ. ಎರಡನೇ ವೀಡಿಯೊದಲ್ಲಿ, ನವನೀತ್ ತನ್ನದೇ ಆದ ಕ್ಷೌರಿಕ ಅಂಗಡಿಯನ್ನು ತೆರೆದಿರುವುದು ಮತ್ತು ಹಮ್ಜಾ ಅಜೀಜ್ ಅಲ್ಲಿ ಕ್ಷೌರ ಮಾಡಿಸಿಕೊಳ್ಳುತ್ತಿರುವುದು ಕಂಡುಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೊಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೆಚ್ಚಿನವರು ನವನೀತ್ ಜೀವನವನ್ನು ಬದಲಾಯಿಸುವಲ್ಲಿ ಹಮ್ಜಾ ಅಜೀಜ್ ಅವರ ಪಾತ್ರವನ್ನು ಶ್ಲಾಘಿಸಿದ್ದಾರೆ. ಇನ್ನೂ ಕೆಲವರು ವಿದ್ಯಾರ್ಥಿಯ ದೃಢಸಂಕಲ್ಪವನ್ನು ಮೆಚ್ಚಿದ್ದಾರೆ. ಇನ್ನು ಕೆಲವರು ಭಾರತದಲ್ಲೇ ಕ್ಷೌರಿಕ ಅಂಗಡಿ ತೆರೆಯುವ ಕನಸನ್ನು ನನಸಾಗಿಸಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಒಬ್ಬ ವ್ಯಕ್ತಿಯು “ಪಂಜಾಬ್‌ನಲ್ಲಿ ಕ್ಷೌರಿಕ ಶಾಲೆಗಳಿಲ್ಲವೇ? ತನ್ನ ಕುಟುಂಬವನ್ನು ಮಿಸ್ ಮಾಡಿಕೊಳ್ಳುತ್ತಿದ್ದರೆ ಅವನು ಮರಳಿ ಹೋಗಬಹುದು” ಎಂದು ಬರೆದಿದ್ದಾರೆ. ಮತ್ತೊಬ್ಬರು, “ಅವನು ತುಂಬಾ ಒಳ್ಳೆಯ ವ್ಯಕ್ತಿ” ಎಂದು ಸೇರಿಸಿದ್ದಾರೆ. “ಕಷ್ಟದ ಸಮಯವು ನಿಮ್ಮನ್ನು ಪ್ರಾಮಾಣಿಕರನ್ನಾಗಿ ಮಾಡುತ್ತದೆ” ಎಂದು ಇನ್ನೊಬ್ಬರು ಪೋಸ್ಟ್ ಮಾಡಿದ್ದಾರೆ.
ಹಮ್ಜಾ ಅಜೀಜ್ ಯೂಟ್ಯೂಬ್ ಚಾನೆಲ್ ಪ್ರಕಾರ, ಅವರು ಕೆನಡಾದಲ್ಲಿ ವಾಸಿಸುವ ಪಾಕಿಸ್ತಾನಿ ವಲಸಿಗರು. ಅವರು ಜನರ ಸ್ಫೂರ್ತಿದಾಯಕ ಕಥೆಗಳು, ಅವರ ಆಸಕ್ತಿಗಳು ಮತ್ತು ಕನಸುಗಳನ್ನು ಹಂಚಿಕೊಳ್ಳುವ ವೀಡಿಯೊಗಳನ್ನು ಮಾಡುತ್ತಾರೆ. ಅವರು ದಾದಿಯಾಗಿ ಕೆಲಸ ಮಾಡುತ್ತಾರೆ. “ನನ್ನ ಚಾನೆಲ್ ಮೂಲಕ, ನಮ್ಮ ಸಮಾಜವನ್ನು ರೂಪಿಸಲು ಸಹಾಯ ಮಾಡಿದ ಕೆನಡಾದ ಶ್ರೀಮಂತ ವೈವಿಧ್ಯತೆ ಮತ್ತು ಕಠಿಣ ಪರಿಶ್ರಮದ ವ್ಯಕ್ತಿಗಳ ಕೊಡುಗೆಗಳನ್ನು ಪ್ರದರ್ಶಿಸಲು ನಾನು ಗುರಿ ಹೊಂದಿದ್ದೇನೆ” ಎಂದು ಅವರು ಹೇಳಿದ್ದಾರೆ.