ಜಮ್ಮು-ಕಾಶ್ಮೀರ : ಐಸ್ ಕ್ರೀಂ ತಿನ್ನಲು ಹೋಗಿ ಕರ್ನಾಟಕದ 17 ಜನರು ಉಗ್ರರ ದಾಳಿಯಿಂದ ಬಚಾವ್ ಆಗಿದ್ದಾರೆ.
ಹೌದು. ಈ ಬಗ್ಗೆ ಜಮ್ಮು-ಕಾಶ್ಮೀರಕ್ಕೆ ಹೋಗಿದ್ದ ಕನ್ನಡತಿ ಸುಮನಾ ಭಟ್ ಹೇಳಿಕೆ ನೀಡಿದ್ದಾರೆ. ಸುಮನಾ ಭಟ್ ಸೇರಿ 17 ಮಂದಿ ಜಮ್ಮು-ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗಿದ್ದರು.
”ನಾವು ದಾರಿ ಮಧ್ಯೆ ಐಸ್ ಕ್ರೀಂ ತಿನ್ನಲು ಗಾಡಿ ನಿಲ್ಲಿಸಿದ್ದೆವು. ಇದರಿಂದ ಪಹಲ್ಗಾಮ್ ತೆರಳಲು ತಡವಾಗಿತ್ತು. ಒಂದು ವೇಳೆ ಮುಂಚೆ ಹೋಗಿದ್ದರೆ ನಾವು ಕೂಡ ಬಲಿಯಾಗುತ್ತಿದ್ದೆವು. ಅದೃಷ್ಟವಶಾತ್ ನಾವೆಲ್ಲರೂ ಪಾರಾಗಿದ್ದೇವೆ. ನಮಗೆ ನಾಡಿದ್ದು ಫ್ಲೈಟ್ ಇದೆ, ನಾವು ಕರ್ನಾಟಕಕ್ಕೆ ವಾಪಸ್ ಆಗುತ್ತೇವೆ’’ ಎಂದು ಹೇಳಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಬೆಂಗಳೂರಿಗ ಬಲಿಯಾಗಿದ್ದು, ಸಾವಿನ ಸಂಖ್ಯೆ 28 ಕ್ಕೇರಿಕೆಯಾಗಿದೆ.
ಸಂತ್ರಸ್ತ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವ ಕಾರ್ಯವನ್ನು ನಮ್ಮ ಸರ್ಕಾರ ಮಾಡಲಿದೆ : ಸಿಎಂ ಸಿದ್ದರಾಮಯ್ಯ
ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಇಂದು ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಿರುವುದು ಆತಂಕ ಹೆಚ್ಚಿಸಿದೆ. ದಾಳಿಗೆ ಬಲಿಯಾದ ಅಮಾಯಕ ಜೀವಗಳನ್ನು ನೆನಪಿಸಿಕೊಂಡರೆ ಎದೆ ನಲುಗುತ್ತದೆ. ಮಡಿದ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಭಯೋತ್ಪಾದಕರ ಈ ಹೇಯ ಕೃತ್ಯದಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಹಲವು ಕನ್ನಡಿಗರು ಕೂಡ ಸಾವನ್ನಪ್ಪಿರುವುದು ಅತ್ಯಂತ ದುಃಖದ ವಿಚಾರ. ಉಗ್ರಕೃತ್ಯದಿಂದಾಗಿ ದೂರದ ಕಾಶ್ಮೀರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ರಾಜ್ಯದ ಅಧಿಕಾರಿಗಳ ತಂಡವನ್ನು ಸಂಜೆಯೇ ರವಾನಿಸಲಾಗಿದೆ. ಈ ಸಂದರ್ಭದಲ್ಲಿ ನಮ್ಮ ಸರ್ಕಾರದಿಂದ ಹೆಚ್ಚಿನ ನೆರವಿನ ಅಗತ್ಯ ಇದೆ ಎನ್ನುವುದನ್ನು ಅರಿತು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರಿಗೆ ಕಾಶ್ಮೀರಕ್ಕೆ ತೆರಳಿ ಇಡೀ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸುವಂತೆ ಸೂಚನೆ ನೀಡಿದ್ದೇನೆ. ಸಂತ್ರಸ್ತ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವ ಕಾರ್ಯವನ್ನು ನಮ್ಮ ಸರ್ಕಾರ ಮಾಡಲಿದೆ.