`PM ಮಿತ್ರ ಟೆಕ್ಸ್ ಟೈಲ್ ಪಾರ್ಕ್’ ಒಂದು ತಿಂಗಳೊಳಗೆ ಜವಳಿ ಇಲಾಖೆಯ ಹೆಸರಿಗೆ ಜಮೀನು ಹಸ್ತಾಂತರ : ಸಚಿವ ಶಿವಾನಂದ ಎಸ್. ಪಾಟೀಲ

ಕಲಬುರಗಿ : ಕಲಬುರಗಿ ಜಿಲ್ಲೆಯ ಜೇವರ್ಗಿ ರಸ್ತೆಯ ಫಿರೋಜಾಬಾದ ಬಳಿ ಕೇಂದ್ರ ಸರ್ಕಾರದ ಪಿ.ಎಂ.ಮಿತ್ರ ಯೋಜನೆಯಡಿ ಸ್ಥಾಪಿಸಲು ಉದ್ದೇಶಿಸಿರುವ ಮೆಗಾ ಟೆಕ್ಸ್ ಟೈಲ್ ಪಾರ್ಕ್‌ಗೆ ಆರಂಭಿಕವಾಗಿ 1,000 ಎಕರೆ ಜಮೀನು ಜವಳಿ ಇಲಾಖೆಗೆ ಒಂದು ತಿಂಗಳೊಳಗೆ ಹಸ್ತಾಂತರಿಸಿ ಆರ್.ಟಿ.ಸಿ.ಯಲ್ಲಿ ಹೆಸರು ಸೇರಿಸಬೇಕೆಂದು ರಾಜ್ಯದ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಉತ್ಪನ್ನ ಮಾರುಕಟೆ ಸಚಿವ ಶಿವಾನಂದ ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ರವಿವಾರ ಕಲಬುರಗಿ ನಗರದ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸುಮಾರು 10 ಸಾವಿರ ಕೋಟಿ ರೂ. ಹೂಡಿಕೆಯ ಈ ಯೋಜನೆ ಸಾಕಾರಕ್ಕೆ ಜಮೀನಿನ ಗಡಿ ರೇಖೆ ಗುರತಿಸುವ ಕೆಲಸ ಬೇಗ ಮುಗಿಸಬೇಕಿದೆ. ಇದರ ಜೊತೆಗೆ ಫೆನ್ಸಿಂಗ್ ಅಥವಾ ತಡೆಗೋಡೆ ನಿರ್ಮಿಸುವ ಮೂಲಕ ಜಮೀನು ಅತಿಕ್ರಮಣವಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಲಬುರಗಿ ಜಿಲ್ಲೆಯಲ್ಲಿ ಕೆಲವು ಸಕ್ಕರೆ ಕಾರ್ಖಾನಗೆಳು ಎಫ್.ಆರ್.ಪಿ ದರಕ್ಕೆ ಕಬ್ಬು ಪಡೆದು ಇನ್ನು ರೈತರಿಗೆ ಹಣ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ರೈತ ಸಂಘಟನೆಗಳು ತಮ್ಮ ಬಳಿ ದೂರು ನೀಡಿವೆ. ಕೂಡಲೆ ಇದನ್ನು ಪರಿಶೀಲಿಸಿ ರೈತರಿಗೆ ಬರಬೇಕಾದ ಬಾಕಿ ಹಣ ಕಾರ್ಖಾನೆಗಳಿಂದ ವಸೂಲಿ ಮಾಡಬೇಕು ಎಂದು ಡಿ.ಸಿ. ಅವರಿಗೆ ಸೂಚಿಸಿದರು.

ಪ್ರಸಕ್ತ ಸಾಲಿನಲ್ಲಿ ವರುಣ ಕೈಕೊಟ್ಟ ಕಾರಣ ಮತ್ತು ನೀರಿನ ಕೊರತೆಯಿಂದ ಪಕ್ವತೆ ಇಲ್ಲದೆ ಕಬ್ಬಿನ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ. ಆದರಿಂದ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯ ನವೆಂಬರ್ 1ರ ನಂತರವೇ ಮಾಡಬೇಕು. ನುರಿಸುವ ಮುನ್ನ ಸಕ್ಕರೆ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯ ಮಾಡಲಾಗಿದೆ. ಕಾರ್ಖಾನೆಗಳು ಇದನ್ನು ಉಲ್ಲಂಘಿಸದಂತೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಸಚಿವ ಶಿವಾನಂದ ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಸಚಿವರು ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿನ ಮಳೆ-ಬೆಳೆ, ಬಿತ್ತನೆ ಪ್ರಮಾಣ, ಜಲಾಶಯದಲ್ಲಿ ನೀರಿನ ಸಂಗ್ರಹಣೆ ಪ್ರಮಾಣ, ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಸಮರ್ಪಕ ಮಳೆಯಾಗದ ಕಾರಣ ಮುಂದಿನ ದಿನದಲ್ಲಿ ಕಲಬುರಗಿ, ವಿಜಯಪುರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇದೆ. ಕೂಡಲೆ ಮಹಾರಾಷ್ಟ್ರದ ರಾಜ್ಯದ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ನೀರು ಬಿಡುಗಡೆಗೆ ಕ್ರಮ ವಹಿಸಬೇಕು ಎಂದರು. ಡಿ.ಸಿ. ಬಿ. ಫೌಜಿಯಾ ತರನ್ನುಮ್ ಮಾತನಾಡಿ, ಈಗಾಗಲೆ ನೆರೆ ರಾಜ್ಯದ ಅಧಿಕಾರಿಗಳೊಂದಿಗೆ ಚರ್ಚಿಸಿಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೂ ತರಲಾಗಿದೆ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read