ಬೆಂಗಳೂರು : ಸಾಹಿತಿ ಬಾನು ಮುಷ್ತಾಕ್ ಅವರು ಅನ್ಯಧರ್ಮದವರೆಂಬ ಕಾರಣಕ್ಕೆ ದಸರಾ ಉದ್ಘಾಟಿಸಬಾರದೆಂದು ವಿರೋಧ ವ್ಯಕ್ತಪಡಿಸಲಾಗುತ್ತಿದೆ, ಇದು ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿಯಾಗಿದ್ದು, ಈ ಕರ್ತವ್ಯವನ್ನು ಎಲ್ಲರೂ ತಪ್ಪದೇ ನಿರ್ವಹಿಸಲೇಬೇಕು. ಪ್ರಜಾಪ್ರಭುತ್ವದ ರಕ್ಷಣೆಯಿಂದ ದೇಶದ ಜನರ ರಕ್ಷಣೆ ಸಾಧ್ಯ. ದೇಶದಲ್ಲಿ ವಿವಿಧ ಜಾತಿ, ಧರ್ಮಗಳ ವ್ಯವಸ್ಥೆಯಿದೆ. ಬಹುಸಂಸ್ಕೃತಿಯುಳ್ಳ ದೇಶದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಲು ಪ್ರಜಾಪ್ರಭುತ್ವದ ವ್ಯವಸ್ಥೆ ಉಳಿಯಬೇಕಿದೆ.
ಇಂದಿನ ಪ್ರಜಾಪ್ರಭುತ್ವ ದಿನಾಚರಣೆಯ ಘೋಷವಾಕ್ಯ ‘ನನ್ನ ಮತ ನನ್ನ ಹಕ್ಕು’. ಈ ಶಕ್ತಿಯನ್ನು ದುರ್ಬಲಗೊಳಿಸುವ ಹುನ್ನಾರ ಪಟ್ಟಭದ್ರ ಹಿತಾಸಕ್ತಿಗಳಿಂದ ನಡೆದಿದೆ. ಶ್ರೀಮಂತರಿಗೆ ಅಧಿಕಾರ ದೊರೆಯುವ ಕಾಲವೊಂದಿತ್ತು. ಆದರೆ ಈಗ ಶ್ರೀಮಂತ ಬಡವ ಬಲ್ಲಿದ ಎಂಬ ಬೇಧವಿಲ್ಲದೇ, ಎಲ್ಲರಿಗೂ ಒಂದೇ ಮತದ ಅಧಿಕಾರ ನೀಡಲಾಗಿದೆ.
ಡಾ.ಬಿ.ಆರ್.ಅಂಬೇಡ್ಕರ್ ಅವರು ‘’ಒಬ್ಬ ವ್ಯಕ್ತಿ, ಒಂದು ಮತ, ಒಂದು ಮೌಲ್ಯ’ ಎಂದರು. ಆದರೆ ಇದರ ದುರುಪಯೋಗಪಡಿಸಿಕೊಂಡು, ಸಂವಿಧಾನವನ್ನು ದುರ್ಬಲಗೊಳಿಸುವ ಕುತಂತ್ರ ನಡೆಯುತ್ತಿದ್ದು, ಇದನ್ನು ನಡೆಯದಂತೆ ನೋಡಿಕೊಳ್ಳಬೇಕಿದೆ. ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿಯಾಗಿದ್ದು, ಈ ಕರ್ತವ್ಯವನ್ನು ಎಲ್ಲರೂ ತಪ್ದೇ ನಿರ್ವಹಿಸಲೇಬೇಕು. ಪ್ರಜಾಪ್ರಭುತ್ವದ ರಕ್ಷಣೆಯಿಂದ ದೇಶದ ಜನರ ರಕ್ಷಣೆ ಸಾಧ್ಯವಾಗುತ್ತದೆ.
ಅಧಿಕಾರವನ್ನು ಉಳಿಸಿಕೊಳ್ಳಲು ಮತಗಳ್ಳತನದ ಹಾದಿಯನ್ನು ಹಿಡಿದಿದ್ದಾರೆ. ಆದ್ದರಿಂದ ನನ್ನ ಮತ ನನ್ನ ಹಕ್ಕು ಎಂಬುದು ಇಂತಹ ಸನ್ನಿವೇಶದಲ್ಲಿ ಪ್ರಮುಖವಾಗಿದ್ದು, ಮತಗಳ ದುರುಪಯೋಗವಾಗಬಾರದು. ಮತಗಳ್ಳತನಕ್ಕೆ ಅವಕಾಶ ನೀಡಬಾರದು.
ಸಾಹಿತಿ ಬಾನು ಮುಷ್ತಾಕ್ ಅವರು ಅನ್ಯಧರ್ಮದವರೆಂಬ ಕಾರಣಕ್ಕೆ ದಸರಾ ಉದ್ಘಾಟಿಸಬಾರದೆಂದು ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಇದು ಸರಿಯಲ್ಲ. ಸಹಿಷ್ಣುತೆ ಹಾಗೂ ಸಹಬಾಳ್ವೆಯನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಜಾತಿ, ಧರ್ಮ, ವರ್ಗವ್ಯವಸ್ಥೆಯನ್ನು ಮೀರಿ, ಸಮಾನತೆ ನೆಲೆಸಬೇಕೆಂದು ಸಂವಿಧಾನ ಸ್ಪಷ್ಟವಾಗಿ ಹೇಳಿದೆ. ಪಟ್ಟಭದ್ರ ಹಿತಾಸಕ್ತಿಗಳ ಮತಾಂಧತೆಯ ವರ್ತನೆಯನ್ನು ಎಲ್ಲರೂ ಒಗ್ಗಟ್ಟಾಗಿ ಖಂಡಿಸಬೇಕು.ಚರ್ಚೆಯೇ ಪ್ರಜಾಪ್ರಭುತ್ವದ ಜೀವಾಳ. ಜನರನ್ನು ತಪ್ಪದಾರಿಗೆಳೆಯುವ ಪ್ರಯತ್ನಗಳು ಖಂಡನೀಯ. ನಾವು ನೀವೆಲ್ಲರೂ ಸೇರಿ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳನ್ನು ಬಲಪಡಿಸಲು ಶ್ರಮಿಸೋಣ ಎಂದರು.