BIG NEWS : ರಾಜ್ಯದಲ್ಲಿ  ಪರಿಶಿಷ್ಟ ಜಾತಿಯವರಿಗೆ ‘ಮೂಲಜಾತಿ ಪ್ರಮಾಣ ಪತ್ರ’ ನೀಡಲು ಸರ್ಕಾರದಿಂದ ಅಧಿಕೃತ ಆದೇಶ.!

ಬೆಂಗಳೂರು : ರಾಜ್ಯದ ಪರಿಶಿಷ್ಟ ಜಾತಿಯವರಿಗೆ ಮೂಲಜಾತಿ ಪ್ರಮಾಣ ಪತ್ರ ನೀಡಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಆದೇಶವಾಗಿರುವ ಹಿನ್ನೆಲೆಯಲ್ಲಿ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಮತ್ತು ಇತರೆ ಸಮುದಾಯಗಳಿಗೆ ಜಾತಿ ಪ್ರಮಾಣ ಪತ್ರಗಳನ್ನು ನೀಡುವ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ (1)ರ ಸರ್ಕಾರದ ಆದೇಶದಲ್ಲಿ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ 101 ಜಾತಿಗಳನ್ನು ಒಳ ಮೀಸಲಾತಿಗಾಗಿ ಸಂವಿಧಾನದ ಅನುಚ್ಛೇಧ 15 ಮತ್ತು ಅನುಚ್ಛೇಧ 16 ರನ್ವಯ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಪ್ರವರ್ಗ- ಎ ರಲ್ಲಿ 16 ಜಾತಿಗಳು ಪ್ರವರ್ಗ-ಬಿ ರಲ್ಲಿ 19 ಜಾತಿಗಳು ಮತ್ತು ಪ್ರವರ್ಗ-ಸಿ ರಲ್ಲಿ 63 ಜಾತಿಗಳನ್ನು ಸೇರಿಸಿ, ಮೂರು ಪ್ರವರ್ಗಗಳಾಗಿ ವರ್ಗೀಕರಿಸಿ, ಆದೇಶ ಹೊರಡಿಸಲಾಗಿದೆ. ಮುಂದುವರೆದು, ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಸಮುದಾಯಗಳನ್ನು ಪ್ರವರ್ಗ ಎ ಮತ್ತು ಪ್ರವರ್ಗ ಬಿ ನಲ್ಲಿ ಮೀಸಲಾತಿ ಸೌಲಭ್ಯವನ್ನು ಪಡೆಯಬಹುದೆಂದು ಆದೇಶಿಸಲಾಗಿದೆ.
ಮೇಲ್ಕಂಡ ಆದೇಶವನ್ನು ಅನುಷ್ಠಾನಗೊಳಿಸಲು ಕೆಲವೊಂದು ಸ್ಪಷ್ಟಿಕರಣ ನೀಡುವುದು ಅಗತ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರ ಪಡೆಯುವ ಬಗ್ಗೆ ಈ ಕೆಳಕಂಡಂತೆ ವಿವರಿಸಲಾಗಿದೆ.

A) ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಈಗಾಗಲೇ ಪಡೆದಿದ್ದಲ್ಲಿ ಅನುಸರಿಸಬೇಕಾದ ವಿಧಾನ:
1) ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಸಮುದಾಯಗಳನ್ನು ಹೊರತುಪಡಿಸಿ ಉಳಿದ 98 ಜಾತಿಗಳನ್ನು ಪ್ರವರ್ಗ- ಎ, ಪ್ರವರ್ಗ-ಬಿ ಮತ್ತು ಪ್ರವರ್ಗ -ಸಿ ಗಳಲ್ಲಿ ವರ್ಗೀಕರಿಸಲಾಗಿದೆ. ಆದರೆ, ಸದರಿ 98 ಸಮುದಾಯದವರು ಈಗಾಗಲೇ ಜಾತಿ ಪ್ರಮಾಣ ಪತ್ರಗಳನ್ನು ಪಡೆದಿರುತ್ತಾರೆ. ಈ 98 ಜಾತಿಗಳು ತಮ್ಮ ಜಾತಿಯನ್ನು ಸ್ಪಷ್ಟವಾಗಿ ತಿಳಿಸಿ, ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿರುವುದರಿಂದ ಅದೇ ಜಾತಿ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಪ್ರವರ್ಗದೊಂದಿಗೆ ಮೀಸಲಾತಿ ಸೌಲಭ್ಯ ಪಡೆಯಲು ಉಪಯೋಗಿಸಬಹುದಾಗಿದೆ. ಆದ್ದರಿಂದ ಸಂಬಂಧಪಟ್ಟ ಪ್ರಾಧಿಕಾರಿಗಳು ಈ ಜಾತಿ ಪ್ರಮಾಣ ಪತ್ರಗಳಿಗೆ ಉಲ್ಲೇಖ(1) ರ ಆದೇಶದಲ್ಲಿ ವರ್ಗೀಕರಿಸಿರುವಂತೆ ಆಯಾ ಜಾತಿಗಳಿಗೆ ಸಂಬಂಧಿಸಿದ ಪ್ರವರ್ಗವನ್ನು ಅಟಲ್ ಜೀ ಜನಸ್ನೇಹಿ ಕೇಂದ್ರದ ತಂತ್ರಾಂಶದಲ್ಲಿ ಅಳವಡಿಸಿಕೊಂಡು ಜಾತಿ ಪ್ರಮಾಣ ಪತ್ರದಲ್ಲಿ ನಮೂದಿಸುವ ಬಗ್ಗೆ ಅಗತ್ಯ ಕ್ರಮವಹಿಸುವುದು.
ಉದಾಹರಣೆ i) : ಅಭ್ಯರ್ಥಿಯು ಕೊರಚ (Koracha) ಎಂದು ಜಾತಿ ಪ್ರಮಾಣ ಪತ್ರ ಈಗಾಗಲೇ
ಪಡೆದಿದ್ದು.ಅಟಲ್ ಜೀ ಜನಸ್ನೇಹಿ ಕೇಂದ್ರದವರು ಉಲ್ಲೇಖ(1)ರಲ್ಲಿನ ಆದೇಶದಂತೆ ಕೊರಚ ಸಮುದಾಯವನ್ನು ಪ್ರವರ್ಗ-ಸಿ ಯಲ್ಲಿ ವರ್ಗೀಕರಿಸಿರುವುದರಿಂದ ಜಾತಿ ಪ್ರಮಾಣ ಪತ್ರವನ್ನು ಕೊರಚ (ಪ್ರವರ್ಗ-ಸಿ) ಎಂದು ನೀಡಲು ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು.

ಉದಾಹರಣೆ ii) : ಅಭ್ಯರ್ಥಿಯು ಪರೆಯನ್, ಪರೆಯ ಎಂದು ಜಾತಿ ಪ್ರಮಾಣ ಪತ್ರ
ಈಗಾಗಲೇ ಪಡೆದಿದ್ದು ಅಟಲ್ ಜೀ ಜನಸ್ನೇಹಿ ಕೇಂದ್ರದವರು ಉಲ್ಲೇಖ(1)ರಲ್ಲಿನ ಆದೇಶದಂತೆ ಪರೆಯನ್, ಪರೆಯ ಸಮುದಾಯವನ್ನು ಪ್ರವರ್ಗ- ಬಿ ಯಲ್ಲಿ ವರ್ಗೀಕರಿಸಿರುವುದರಿಂದ ಜಾತಿ ಪ್ರಮಾಣ ಪತ್ರವನ್ನು ಪರೆಯನ್, ಪರೆಯ (ಪ್ರವರ್ಗ-ಸಿ) ಎಂದು ನೀಡಲು ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು.
2) ಈಗಾಗಲೇ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪತ್ರ ಪಡೆದವರು, ಸಂಬಂಧಿಸಿದ ಪ್ರವರ್ಗ ಎ ಅಥವಾ ಪ್ರವರ್ಗ-ಬಿ ರಲ್ಲಿ ಮೀಸಲಾತಿ ಸೌಲಭ್ಯ ಪಡೆಯಬೇಕಾದಲ್ಲಿ ತಮ್ಮ ಮೂಲ ಜಾತಿ ಹಾಗೂ ಪ್ರವರ್ಗವನ್ನು ಉಲ್ಲೇಖ(1)ರ ಆದೇಶದಂತೆ ಸ್ಪಷ್ಟವಾಗಿ ನಮೂದಿಸಿ, ಅರ್ಜಿ ನಮೂನೆ -1 ರಲ್ಲಿ ಪ್ರಸ್ತುತ ಜಾರಿಯಲ್ಲಿರುವ ಪದ್ಧತಿಯಂತೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು.

3) ಅರ್ಜಿ ಸ್ವೀಕರಿಸಿದ ಪ್ರಾಧಿಕಾರಗಳು ಕರ್ನಾಟಕ ಅನುಸೂಚಿತ ಜಾತಿಗಳು ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ, ಮುಂತಾದುವುಗಳ ಮೀಸಲಾತಿ) ಅಧಿನಿಯಮ 1990 ತಿದ್ದುಪಡಿ ಅಧಿನಿಯಮ 2024 ಮತ್ತು ನಿಯಮಗಳು 1992, ಮತ್ತು ಸರ್ಕಾರದ ಸುತ್ತೋಲೆ ಸಂಖ್ಯೆ: ಸಕಇ 41 ಎಸ್ಎಡಿ 2022, ದಿನಾಂಕ: 02-07-2022ರನ್ವಯ ಪರಿಶೀಲಿಸಿ, ಅಭ್ಯರ್ಥಿಗಳ ಮೂಲ ಜಾತಿಯ ಬಗ್ಗೆ ಸ್ಥಳೀಯ ವಿಚಾರಣೆ ನಡೆಸಿ, ಮೂಲ ಜಾತಿಯನ್ನು ಖಾತರಿಪಡಿಸಿಕೊಂಡು ಉಲ್ಲೇಖ(1)ರಲ್ಲಿ ವರ್ಗೀಕರಿಸಿರುವಂತೆ ಮೂಲ ಜಾತಿಯೊಂದಿಗೆ ಪ್ರವರ್ಗವನ್ನು ನಮೂದಿಸಿ, ಜಾತಿ ಪ್ರಮಾಣ ಪತ್ರವನ್ನು ನೀಡುವುದು.

ಉದಾಹರಣೆ: i) ಅಭ್ಯರ್ಥಿಯು ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪತ್ರ ಪಡೆದಿದ್ದು ಹಾಗೂ ಮೂಲ ಜಾತಿಯು ಹೊಲೆಯ ಎಂದು ಇದ್ದಲ್ಲಿ ಜಾತಿ ಪ್ರಮಾಣ ಪತ್ರದಲ್ಲಿ ಆದಿ ಕರ್ನಾಟಕ (ಹೊಲೆಯ/ಪ್ರವರ್ಗ-ಬಿ) ಎಂದು ನಮೂದಿಸಿ, ಜಾತಿ ಪ್ರಮಾಣ ಪತ್ರ ನೀಡುವುದು.

ii) ಅಭ್ಯರ್ಥಿಯು ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪತ್ರ ಪಡೆದಿದ್ದು ಹಾಗೂ ಮೂಲ ಜಾತಿಯು ಮಾದಿಗ ಎಂದು ಇದ್ದಲ್ಲಿ ಜಾತಿ ಪ್ರಮಾಣ ಪತ್ರದಲ್ಲಿ ಆದಿ ಕರ್ನಾಟಕ (ಮಾದಿಗ/ಪ್ರವರ್ಗ-ಎ) ಎಂದು ನಮೂದಿಸಿ, ಜಾತಿ ಪ್ರಮಾಣ ಪತ್ರ ನೀಡುವುದು.

ಉದಾಹರಣೆ (1) ಮತ್ತು (2) ರಂತೆ ಆದಿ ದ್ರಾವಿಡ ಮತ್ತು ಅದಿ ಆಂಧ್ರ ಅಭ್ಯರ್ಥಿಗಳು ಇದೇ ರೀತಿ ಜಾತಿ ಪ್ರಮಾಣ ಪತ್ರ ನೀಡಲು ಕ್ರಮವಹಿಸುವುದು.ಸದರಿ ಪ್ರಕ್ರಿಯೆಯು ಆದಿ ದ್ರಾವಿಡ, ಆದಿ ಆಂಧ್ರ ಮತ್ತು ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪತ್ರ ಪಡೆದವರಿಗೆ ಮಾತ್ರ ಅನ್ವಯಿಸುತ್ತದೆ.

4) ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ್ಕೆ ಸೇರಿದ ಇತರೆ (ಮೂಲ ಜಾತಿಯನ್ನು ತಿಳಿಸದೇ ಇರುವ) ಅಭ್ಯರ್ಥಿಗಳು, ಉಲ್ಲೇಖ(1)ರ ಆದೇಶದಂತೆ, ಪ್ರವರ್ಗ- ಎ ಅಥವಾ ಪ್ರವರ್ಗ- ಬಿ ಯನ್ನು ಆಯ್ಕೆ ಮಾಡಿಕೊಂಡು ಸ್ಪಷ್ಟವಾಗಿ ನಮೂದಿಸಿ. ಮುಚ್ಚಳಿಕೆ ಪತ್ರ (Affidavit) ದೊಂದಿಗೆ ಅರ್ಜಿ ಸಲ್ಲಿಸುವುದು.

5) ಅರ್ಜಿ ಸ್ವೀಕರಿಸಿದ ಪ್ರಾಧಿಕಾರಗಳು ಕರ್ನಾಟಕ ಅನುಸೂಚಿತ ಜಾತಿಗಳು ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ, ಮುಂತಾದುವುಗಳ ಮೀಸಲಾತಿ) ಅಧಿನಿಯಮ 1990 ತಿದ್ದುಪಡಿ ಅಧಿನಿಯಮ 2024 ಮತ್ತು ನಿಯಮಗಳು 1992, ಮತ್ತು ಸರ್ಕಾರದ ಸುತ್ತೋಲೆ ಸಂಖ್ಯೆ: ಸಕಇ 41 ಎಸ್ಎಡಿ 2022, ದಿನಾಂಕ: 02-07-2022ರನ್ನಯ ಪರಿಶೀಲಿಸಿ, ಅಭ್ಯರ್ಥಿಗಳೂ ಪರಿಶಿಷ್ಟ ಜಾತಿಗೆ ಸೇರಿರುವ ಬಗ್ಗೆ ಖಾತರಿಪಡಿಸಿಕೊಂಡು ಮೇಲ್ಕಂಡ ಕ್ರಮಸಂಖ್ಯೆ (4)ರಂತೆ, ನೀಡಿರುವ ಮುಚ್ಚಳಿಕೆ ಪತ್ರ (Affidavit)ನಲ್ಲಿ ಘೋಷಿಸಿರುವ ಪ್ರವರ್ಗವನ್ನು ನಮೂದಿಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡುವುದು.
ಉದಾಹರಣೆ: 1) ಅಭ್ಯರ್ಥಿಯು ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪತ್ರ ಪಡೆದಿದ್ದು.
ಅರ್ಜಿಯಲ್ಲಿ ಮೂಲ ಜಾತಿಯನ್ನು ತಿಳಿಸದೇ ಇದ್ದಲ್ಲಿ ಜಾತಿ ಪ್ರಮಾಣ ಪತ್ರದಲ್ಲಿ ಆದಿ ಕರ್ನಾಟಕ (ಪ್ರವರ್ಗ-ಎ ಅಥವಾ ಪ್ರವರ್ಗ-ಬಿ) [ಅಭ್ಯರ್ಥಿಯು Affidavit ನಲ್ಲಿ ಘೋಷಿಸಿರುವಂತೆ] ನಮೂದಿಸಿ, ಜಾತಿ ಪ್ರಮಾಣ ಪತ್ರ ನೀಡುವುದು.

ಆದಿ ದ್ರಾವಿಡ ಮತ್ತು ಅದಿ ಆಂಧ್ರ ಅಭ್ಯರ್ಥಿಗಳು ಇದೇ ರೀತಿ ಜಾತಿ ಪ್ರಮಾಣ ಪತ್ರ ನೀಡಲು ಕ್ರಮವಹಿಸುವುದು. ಸದರಿ ಪ್ರಕ್ರಿಯೆಯು ಆದಿ ದ್ರಾವಿಡ, ಆದಿ ಆಂಧ್ರ ಮತ್ತು ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪತ್ರ ಪಡೆದು ಮೂಲಜಾತಿಯನ್ನು ಅರ್ಜಿಯಲ್ಲಿ ತಿಳಿಸದೇ ಇರುವ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.
6) ಅಭ್ಯರ್ಥಿಗಳು ಮೇಲಿನ ಕ್ರಮಸಂಖ್ಯೆ (4) ರಂತೆ ಆಯ್ಕೆ ಮಾಡಿಕೊಂಡು ಯಾವ ಪ್ರವರ್ಗದಲ್ಲಿ ಜಾತಿ ಪ್ರಮಾಣ ಪತ್ರ ಪಡೆದಿರುತ್ತಾರೆಯೋ ಅದೇ ಪ್ರವರ್ಗ ಅವರ ಕುಟುಂಬಕ್ಕೆ ಶಾಶ್ವತವಾಗಿ ಮುಂದುವರೆಯುತ್ತದೆ. ಯಾವುದೇ ಕಾರಣಕ್ಕೂ ಬದಲಾವಣೆಗೆ ಅವಕಾಶವಿರುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read