ಕೊಡಗು: ಪ್ರಭಾರ ಯೋಜನಾಧಿಕಾರಿಯೊಬ್ಬರು ಕಾರಿನಲ್ಲಿಯೇ ಕುಳಿತ ಸ್ಥಿತಿಯಲ್ಲಿಯೇ ಸಾವನ್ನಪ್ಪಿದ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಪ್ರಭಾರ ಯೋಜನಾಧಿಕಾರಿ ಮನಮೋಹನ್ ರಾಯ್ (47) ಮೃತ ದುರ್ದೈವಿ. ತಿತಿಮತಿ ಗ್ರಾಮದಲ್ಲಿ ವಾಸವಾಗಿದ್ದ ಮನಮೋಹನ್ ರಾಯ್, ತಮ್ಮ ಕಾರನ್ನು ಸರ್ವಿಸ್ ಮಾಡಿಸಲೆಂದು ಪಿರಿಯಾಪಟ್ಟಣಕ್ಕೆ ತೆರಳಿದ್ದರು. ಬಳಿಕ ವಾಪಸ್ ಆಗುವಾಗ ಪಿರಿಯಾಪಟ್ಟಣದ ಬೂದಿತಿಟ್ಟು ಗ್ರಾಮದ ಬಳಿ ರಸ್ತೆಬದಿ ಕಾರು ನಿಲ್ಲಿಸಿದ್ದಾರೆ. ಕಾರಿನಲ್ಲಿ ಕುಳಿತ ಸ್ಥಿತಿಯಲ್ಲಿಯೇ ಮನಮೋಹನ್ ರಾಯ್ ಮೃತಪಟ್ಟಿದ್ದಾರೆ.
ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.