ಭುವನೇಶ್ವರ: ಅಪ್ರಾಪ್ತ ವಯಸ್ಕಳನ್ನು ಬಲವಂತವಾಗಿ ಮದುವೆ ಮಾಡಿ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಒಡಿಶಾ ಪೊಲೀಸ್ ಇಲಾಖೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಬಾಲಸೋರ್ ಜಿಲ್ಲೆಯ ಬಲಿಯಾಪಾಲ್ ಪ್ರದೇಶದ ನಿವಾಸಿ ಎಎಸ್‌ಐ ಅಮಿತ್ ಪಾಧಿ ಅಮಾನತುಗೊಂಡವರು ಅವರನ್ನು ಪುರಿ ಜಿಲ್ಲೆಯಲ್ಲಿ ನಿಯೋಜಿಸಲಾಗಿತ್ತು.
ಅಮಿತ್ ಜಗತ್ಸಿಂಗ್‌ಪುರ ಜಿಲ್ಲೆಯ 10 ನೇ ತರಗತಿಯ ವಿದ್ಯಾರ್ಥಿನಿ(15/16 ವರ್ಷ) ಜೊತೆ ಫೇಸ್‌ಬುಕ್‌ನಲ್ಲಿ ಸಂಬಂಧ ಬೆಳೆಸಿಕೊಂಡ ನಂತರ ಆಕೆಯನ್ನು ವಿವಾಹವಾಗಿ ಆಕೆಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 2024 ರಲ್ಲಿ ಅಮಿತ್ ಪಾಧಿ ನನ್ನ ಅಪ್ರಾಪ್ತ ಮಗಳನ್ನು ಬಲವಂತವಾಗಿ ಮದುವೆಯಾದರು. ಆಕೆಯ ವಯಸ್ಸು 22 ಎಂದು ಇತರರಿಗೆ ಹೇಳುವಂತೆ ಒತ್ತಾಯಿಸಿದ್ದರು. ಮದುವೆಯ ನಂತರ, ಅಮಿತ್ ಮತ್ತು ಅವರ ಕುಟುಂಬ ಸದಸ್ಯರು ಆಕೆಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ. ನಂತರ ಎಎಸ್‌ಐ ತನ್ನ ಪತ್ನಿಯನ್ನು ಜಗತ್ಸಿಂಗ್‌ಪುರದಲ್ಲಿರುವ ತನ್ನ ಪೋಷಕರ ಮನೆಯಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಬಾಲಕಿ ತಾಯಿ ಆರೋಪಿಸಿದ್ದಾರೆ.
ಸಂತ್ರಸ್ತರಿಂದ ಲಿಖಿತ ದೂರು ಸ್ವೀಕರಿಸಿದ ನಂತರ, ಜಗತ್ಸಿಂಗ್‌ಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆ ಈ ಹಿಂದೆ ಪೊಲೀಸ್ ದೂರು ನೀಡುವುದಾಗಿ ತಿಳಿಸಿದ್ದರಿಂದ, ಪುರಿಯಿಂದ ಅಮಿತ್ ಕಾಣೆಯಾಗಿದ್ದಾರೆ ಎಂದು ಜಗತ್ಸಿಂಗ್‌ಪುರ ಎಸ್‌ಪಿ ಭವಾನಿ ಶಂಕರ್ ಉದ್ಗಾಟ ಹೇಳಿದ್ದಾರೆ.
ಘಟನೆಯ ಬಗ್ಗೆ ನಾವು ಪುರಿ ಎಸ್‌ಪಿಗೆ ತಿಳಿಸಿದಾಗ, ಅವರು ಅಮಿತ್ ಅವರನ್ನು ಪೊಲೀಸ್ ಸೇವೆಯಿಂದ ಅಮಾನತುಗೊಳಿಸಿದರು. ಆರೋಪಿ ಎಎಸ್‌ಐ ಇನ್ನೂ ನಾಪತ್ತೆಯಾಗಿದ್ದು, ಅವರನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ. ಎಎಸ್‌ಐ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಪಿ ಉದ್ಗಾಟ ಹೇಳಿದ್ದಾರೆ.